ಟಿಯಾನ್ಜಿನ್, ಏ.7-ಭಾರತೀಯ ಟೆನಿಸ್ ಕ್ರೀಡಾರಂಗದ ವಯೋರಹಿತ ಅದ್ಭುತ ಪಟು ಎಂದೇ ಖ್ಯಾತಿ ಪಡೆದಿರುವ ಲಿಯಾಂಡರ್ ಪೇಸ್ ಇಂದು ಡೇವಿಸ್ ಕಪ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಡಬಲ್ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಪೇಸ್ 43ನೇ ಗೆಲುವಿನೊಂದಿಗೆ ವಿಶ್ವ ದಾಖಲೆ ನಿರ್ಮಿಸಿ ಭಾರತ ಹೆಮ್ಮೆಪಡುವಂತೆ ಮಾಡಿದ್ದಾರೆ
ಚೀನಾದ ಟಿಯಾನ್ಜಿನ್ನಲ್ಲಿ ಇಂದು ನಡೆದ ಎಐಟಿಎ ಪಂದ್ಯದಲ್ಲಿ ಪೇಸ್-ರೋಹನ್ ಬೋಪಣ್ಣ ಜೋಡಿ(ಭಿನ್ನಾಭಿಪ್ರಾಯಗಳಿಂದ ಸುದ್ದಿಯಾಗಿದ್ದರು) ಚೀನಾದ ಪ್ರಬಲ ಮೊ ಕ್ಸಿನ್ ಗಾಂಗ್ ಮತ್ತು ಜೆ ಜಾಂಗ್ ವಿರುದ್ದ 5-7, 7-6(5), 6-6(3) ಸೆಟ್ಗಳಿಂದ ಮಣಿಸಿ ಜಯ ಸಾಧಿಸಿತು.
ಈ ಗೆಲುವಿನೊಂದಿಗೆ ಭಾರತದ ಡೇವಿಸ್ ಕಪ್ ಹೀರೋ 44 ವರ್ಷದ ಪೇಸ್, ಇಟಲಿಯ ಪೀಟರೆಂಜೆಲೆ ಅವರ ಹೆಸರಿನಲ್ಲಿದ್ದ 42 ಪಂದ್ಯಗಳ ಜಯದ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇದರೊಂದಿಗೆ ಡೇವಿಸ್ ಕಪ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಡಬಲ್ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
1990ರಿಂದ ತಮ್ಮ 16ನೇ ವರ್ಷದಲ್ಲಿ ಡೇವಿಸ್ ಕಪ್ ಪಂದ್ಯಾವಳಿಗೆ ಪಾದಾರ್ಪಣೆ ಮಾಡಿದ ಪೇಸ್, ತಮ್ಮ ಆಪ್ತ ಜೊತೆಗಾರ ಮಹೇಶ್ ಭೂಪತಿ ಜೊತೆ ಒಟ್ಟು 24 ಡಬಲ್ ಪಂದ್ಯಗಳನ್ನು ಗೆದ್ದಿದ್ದಾರೆ. ಕ್ಷಿಪಣಿ ವೇಗದಲ್ಲಿ ಸರ್ವ್ ಮಾಡುವ ಪೇಸ್ ಚೆಂಡನ್ನು ಎದುರಿಸುವುದು ಎದುರಾಳಿಗಳಿಗೆ ಈಗಲೂ ಕಷ್ಟ ಎನ್ನುವಷ್ಟರ ಮಟ್ಟಿಗೆ ತಮ್ಮ ದೈಹಿಕ ಸಾಮಥ್ರ್ಯ ಮತ್ತು ಪ್ರಾಬಲ್ಯ ಉಳಿಸಿಕೊಂಡಿದ್ದಾರೆ. 29 ವರ್ಷಗಳ ಕಾಲ ಟೆನಿಸ್ನಲ್ಲಿ ಮಿಂಚಿನ ಆಟಗಾರ ಎಂದು ಗುರುತಿಸಿ ಕೊಂಡಿರುವ ಪೇಸ್ಗೆ ಈ ಕೀರ್ತಿ ಸಂತಸ ನೀಡಿದೆ.