ಕೊಲ್ಕತ್ತಾ, ಏ.7- ಇದು ಸಿನಿಮಾದ ದೃಶ್ಯವೊಂದನ್ನು ನೆನೆಪಿಸುವ ಕಾರ್ಯಾಚರಣೆ. ರನ್ವೇನಲ್ಲಿ ತೆರಳುತ್ತಿದ್ದ ವಿಮಾನವೊಂದನ್ನು ನಿಲ್ಲಿಸಿ ಆಭರಣ ಉದ್ಯಮಿಯೊಬ್ಬನನ್ನು ಬಂಧಿಸಿ 16 ಕೋಟಿ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡ ಘಟನೆ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಕೊಲ್ಕತ್ತಾದಿಂದ ಹೈದರಾಬಾದ್ಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಆದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳಿಗೆ ಲಭಿಸಿತು. ತಕ್ಷಣ ಕಾರ್ಯ ಪ್ರವೃತ್ತರಾದ ಅವರು ಏರ್ಪೆÇೀರ್ಟ್ಗೆ ಬಂದಾಗ ಆ ವಿಮಾನ ರನ್ವೇನಲ್ಲಿ ತೆರಳುತ್ತಾ ಮೇಲೇರುವ ಅಂತಿಮ ಹಂತದಲ್ಲಿತ್ತು. ತಕ್ಷಣ ಪೈಲೆಟ್ಗೆ ಮಾಹಿತಿ ನೀಡಲಾಯಿತು. ರನ್ವೇನಲ್ಲಿದ್ದ ವಿಮಾನ ನಿಲುಗಡೆಯಾಯಿತು.
ಅಧಿಕಾರಿಗಳು ಆಭರಣ ಉದ್ಯಮಿ ಸಂಜಯ್ಕುಮಾರ್ ಅಗರ್ವಾಲ್ನನ್ನು ಬಂಧಿಸಿ, 16 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡರು. ವಿಚಾರಣೆ ವೇಳೆ ತನ್ನ ಪುತ್ರನ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡಿ ಅದನ್ನು ಬಳಸಿ ವಿಮಾನಯಾನ ಮಾಡುತ್ತಿದ್ದ ಸಂಗತಿಯೂ ಬಯಲಾಯಿತು. ಇದೇ ವೇಳೆ ಆತನ ಪುತ್ರ ಕೊಲ್ಕತ್ತಾದಿಂದ ದುಬೈಗೆ ತೆರಳಲು ಎಮಿರೆಟ್ಟ್ ವಿಮಾನ ಬುಕ್ ಮಾಡಿದ ಸಂಗತಿಯೂ ಬೆಳಕಿಗೆ ಬಂದಿತು. ನಂತರ ಮಗನನ್ನು ಬಂಧಿಸಲಾಗಿದೆ.
ಅಕ್ರಮ ಚಿನ್ನ ರಫ್ತು ವಹಿವಾಟಿನಲ್ಲಿ ಇವರು ಶಾಮೀಲಾಗಿರುವುದು ಪತ್ತೆಯಾಗಿದ್ದು, ವಿಚಾರಣೆ ತೀವ್ರಗೊಂಡಿದೆ.