ನವದೆಹಲಿ/ಮುಂಬೈ, ಏ.7-ಕ್ರೀಡಾ ಕ್ಷೇತ್ರವನ್ನು ತಲ್ಲಣಗೊಳಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ಪಟುಗಳ ಚೆಂಡು ವಿರೂಪ ಪ್ರಕರಣದ ಕರಾಳ ಛಾಯೆ ನಡುವೆ ಇಂದಿನಿಂದ ಆರಂಭವಾಗಲಿರುವ ಚುಟುಕು ಕ್ರಿಕೆಟ್ ಟಿ-20 ಮಿನಿ ಮಹಾಸಮರದಲ್ಲಿ ಭಾರೀ ಬೆಟ್ಟಿಂಗ್ ಅವ್ಯವಹಾರ ದಂಧೆಗೂ ತೆರೆಮರೆಯಲ್ಲಿ ಸಿದ್ಧತೆಗಳು ನಡೆದಿವೆ.
ಚುಟುಕು ಕ್ರಿಕೆಟ್ ರೋಮಾಂಚನಕ್ಕಾಗಿ ಕಾತುರದಿಂದ ಕಾಯುತ್ತಿರುವ ಕ್ರೀಡಾಪ್ರೇಮಿಗಳಿಗೆ ರಸದೌತಣ ನೀಡಲು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 11ನೇ ಆವೃತ್ತಿಗೆ ಇಂದು ಸಂಜೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಲಿದೆ. ರಜೆಯಲ್ಲಿರುವ ವಿದ್ಯಾರ್ಥಿಗಳಿಗೆ ಈ ಚುಟುಕು ಕ್ರಿಕೆಟ್ ಡಬಲ್ ಧಮಾಕ ನೀಡಲಿದೆ.
ಇದೇ ವೇಳೆ ರಾಜಧಾನಿ ದೆಹಲಿ, ಮುಂಬೈ, ಕೊಲ್ಕತಾ, ಚೆನ್ನೈ, ಬೆಂಗಳೂರು ಸೇರಿದಂತೆ ಪ್ರಮುಖ ಮಹಾನಗರಗಳಲ್ಲಿ ರಹಸ್ಯ ಬೆಟ್ಟಿಂಗ್ ದಂಧೆಗೂ ಭಾರೀ ಸಿದ್ಧತೆ ನಡೆದಿದ್ದು, ಕೋಟ್ಯಂತರ ರೂ.ಗಳ ಸಟ್ಟಾಬಾಜಿ ವಹಿವಾಟು ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕ್ರಿಕೆಟ್ ಬೆಟ್ಟಿಂಗ್ ಕಾನೂನು ಬಾಹಿರವಾಗಿದ್ದು, ಬುಕ್ಕಿಗಳು ಮತ್ತು ಪಣಕ್ಕಾಗಿ ಹಣ ಇಡುವವರು ಗೋಪ್ಯವಾಗಿ ಈ ದಂಧೆಯಲ್ಲಿ ತೊಡಗಲು ಎಲ್ಲ ರೀತಿಯ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣಗಳ ಸುಳಿಗೆ ಸಿಲುಕಿ ನಿಷೇಧಕ್ಕೆ ಒಳಗಾಗಿದ್ದ ಸಿಎಸ್‍ಕೆ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳು ಈ ಬಾರಿ ಐಪಿಎಸ್‍ಗೆ ಮರಳಿದ್ದು, ಪಂದ್ಯಾವಳಿ ರಂಗೇರಿದೆ. ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಕ್ಕೆ ಒಳಾಗಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರ ಅನುಪಸ್ಥಿತಿ ಈ ಬಾರಿ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಮೂಡಿಸಿದೆ. ವರ್ಣರಂಜಿತ ಸಮಾರಂಭ : ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಸಂಜೆ ಟೂರ್ನಿ ಉದ್ಘಾಟನೆಯಾಗಲಿದೆ. ರಾತ್ರಿ ನಡೆಯುವ ಪ್ರಥಮ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ ತಂಡ ಎರಡು ಬಾರಿ ಪ್ರಶಸ್ತಿ ಗಳಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.