ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವರ್ಷ 30.48 ಕೋಟಿ ಮೌಲ್ಯದ 100ಕೆಜಿ ಚಿನ್ನ ಸಾಗಣೆದಾರರ ವಶ

ಬೆಂಗಳೂರು, ಏ.7- ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ಚಿನ್ನ ಕಳ್ಳ ಸಾಗಾಣಿಕೆಯ ರಹದಾರಿಯಾಗಿ ಮಾರ್ಪಡುತ್ತಿದೆಯೇ..? ಇತ್ತೀಚಿನ ವರದಿಗಳನ್ನು ಗಮನಿಸಿದರೆ ಇದು ಸತ್ಯ ಎನಿಸುತ್ತಿದೆ.

ಕಳೆದ ವರ್ಷ 9.97 ಕೋಟಿ ಮೌಲ್ಯದ 34.5 ಕೆಜಿ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣಗಳು ಬಯಲಾಗಿದ್ದವು. ಈ ವರ್ಷ ಕಳ್ಳಸಾಗಾಣಿಕೆಯಾಗುತ್ತಿದ್ದ 30.48 ಕೋಟಿ ಮೌಲ್ಯದ 100ಕೆಜಿ ಚಿನವನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಕಸ್ಟಮ್ಸ್ ಅಧಿಕಾರಿಗಳ ವರದಿ ಬೆಚ್ಚಿ ಬೀಳಿಸಿದೆ.
ವರ್ಷದಿಂದ ವರ್ಷಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಚಿನ್ನ ಕಳ್ಳ ಸಾಗಾಣಿಕೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕಳ್ಳ ಸಾಗಾಣಿಕೆದಾರರು ಚಿನ್ನದ ಬಿಸ್ಕೆಟ್‍ಗಳನ್ನು ಜ್ಯೂಸ್ ಪ್ಯಾಕೆಟ್‍ಗಳಲ್ಲಿ ಸಾಗಿಸುತ್ತಿರುವುದು, ಮಹಿಳೆಯರ ಹೇರ್‍ಪಿನ್‍ಗಳಲ್ಲಿ ಬಚ್ಚಿಡುವುದು, ಸೂಟ್‍ಕೇಸ್ ಸಾಗಿಸುವ ಟ್ರಾಲಿ ಬ್ಯಾಗ್‍ಗಳಲ್ಲಿ ಚಿನ್ನ ಸಾಗಿಸುತ್ತಿರುವುದು ಪತ್ತೆಯಾಗುತ್ತಿದೆ ಎಂದು ಕಸ್ಟಮ್ಸ್ ವಿಭಾಗದ ಹೆಚ್ಚುವರಿ ಆಯುಕ್ತ ಹರ್ಷವರ್ಧನ್ ಉಮ್ರೆ ತಿಳಿಸಿದ್ದಾರೆ.

ಕಳ್ಳಸಾಗಾಣಿಕೆದಾರರು ಮತ್ತು ಕೊರಿಯರ್ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ 100ಕೆಜಿ ಚಿನ್ನವನ್ನು ಈ ವರ್ಷ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಅಂಕಿ-ಅಂಶ ನೀಡಿದ್ದಾರೆ.
ಮಕ್ಕಳಿಗೆ ಗಿಫ್ಟ್ ನೀಡುವ ಬೊಂಬೆಯಲ್ಲಿ ಚಿನ್ನ ಹುದುಗಿಸಿ ಅದನ್ನು ಕೊರಿಯರ್ ಮಾಡುವ ಮೂಲಕ ಸುಮಾರು 1ಕೆಜಿಯಷ್ಟು ಚಿನ್ನ ಸಾಗಿಸಲು ಯತ್ನಿಸುತ್ತಿದ್ದ ಪ್ರಕರಣವೊಂದನ್ನು ಭೇದಿಸಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.

ಕೆಲವು ಕ್ರಿಮಿನಲ್‍ಗಳು ಮಣ್ಣಿನ ಪೌಚ್‍ಗಳಲ್ಲಿ ಚಿನ್ನದ ಪುಡಿಯನ್ನು ಬೆರೆಸಿ ಯಾರಿಗೂ ಅನುಮಾನ ಬಾರದಂತೆ ಚಿನ್ನ ಸಾಗಾಣಿಕೆ ಮಾಡುತ್ತಿದ್ದುದನ್ನು ನಮ್ಮ ಅಧಿಕಾರಿಗಳು ಚಾಣಾಕ್ಷತನದಿಂದ ಪತ್ತೆ ಹಚ್ಚಿದ್ದಾರೆ ಎಂದು ಹರ್ಷವರ್ಧನ್ ವಿವರಿಸಿದರು.

ಚಿನ್ನ ಸಾಗಾಣಿಕೆ ಮಾಡುವ ಬಹುತೇಕ ಪ್ರಕರಣಗಳು ದುಬೈ ಮೂಲಕವೇ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ದುಬೈಗೆ ತೆರಳುವ ಮತ್ತು ಹಿಂದಿರುಗುವ ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದ್ದು, ಇದುವರೆಗೂ ಜೋರ್ಡಾನ್ ಮತ್ತು ಶ್ರೀಲಂಕಾ ಪ್ರಜೆಗಳು ಸೇರಿದಂತೆ 34 ಚಿನ್ನ ಕಳ್ಳ ಸಾಗಾಣಿಕೆದಾರರನ್ನು ಬಂಧಿಸಲಾಗಿದೆ ಎಂದು ಅವರು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ