ಬೆಂಗಳೂರು, ಏ.7-ಎಲ್ಲಾ ಮತದಾರರಿಗೆ ಹೈ ವೋಲ್ಟೇಜ್ ಕ್ಷೇತ್ರಗಳತ್ತ ಚಿತ್ತ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲು ನಿರ್ಧರಿಸಿರುವ ಚಾಮುಂಡೇಶ್ವರಿ, ಕುಮಾರಸ್ವಾಮಿ ಕಣಕ್ಕಿಳಿಯಲು ಮುಂದಾಗಿರುವ ಚನ್ನಪಟ್ಟಣ, ರಾಮನಗರ, ಯಡಿಯೂರಪ್ಪನವರ ಕ್ಷೇತ್ರವಾದ ಶಿಕಾರಿಪುರದತ್ತಲೇ ಎಲ್ಲರ ಗಮನ ನೆಟ್ಟಿದೆ.
ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ಒಬ್ಬರು ಹಾಲಿ ಮುಖ್ಯಮಂತ್ರಿಗಳ ಕ್ಷೇತ್ರಗಳು ಹೈವೋಲ್ಟೇಜ್ ಕ್ಷೇತ್ರಗಳಾಗಿದ್ದು, ಎಲ್ಲರ ಚಿತ್ತ ಅತ್ತ ನೆಟ್ಟಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ಎಲ್ಲರ ಗಮನ ತೀವ್ರಗೊಂಡಿದೆ. ಅವರು ಅಲ್ಲಿ ಸ್ಪರ್ಧಿಸಿದರೆ ಆಗುವ ಸಾಧಕ-ಬಾಧಕಗಳ ಬಗ್ಗೆಯೇ ಲೆಕ್ಕಾಚಾರ ಹೆಚ್ಚಾಗಿದೆ.
ಈಗಾಗಲೇ ಒಂದು ವಾರಕ್ಕೂ ಹೆಚ್ಚು ಕಾಲ ಆ ಕ್ಷೇತ್ರದಲ್ಲೇ ಬೀಡುಬಿಟ್ಟು ಅವರು ಪ್ರಚಾರ ನಡೆಸಿದ್ದರೂ ಕ್ಷೇತ್ರದ ಪರಿಸ್ಥಿತಿ ತಮಗೆ ಪೂರಕವಾಗುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಪರ್ಯಾಯ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಗುಪ್ತಚರ ಇಲಾಖೆ ಕೂಡ ಚಾಮುಂಡೇಶ್ವರಿ ಕ್ಷೇತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಷ್ಟು ಸೇಫ್ ಅಲ್ಲ, ಪಕ್ಕದ ವರುಣಾ, ಬಸವಕಲ್ಯಾಣ, ಗಂಗಾವತಿ, ಅಥವಾ ಬೆಂಗಳೂರಿನ ಶಾಂತಿನಗರದಲ್ಲಿ ಸ್ಪರ್ಧಿಸುವುದು ಸೂಕ್ತ ಎಂಬ ಮಾಹಿತಿ ನೀಡಿದ್ದಾರೆ.
ಇತ್ತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಒಂದಕ್ಕಿಂತ ಎರಡು ಕ್ಷೇತ್ರ ಸೂಕ್ತ. ಎರಡರಲ್ಲೂ ಗೆದ್ದರೆ ಒಂದಕ್ಕೆ ರಾಜೀನಾಮೆ ನೀಡಿ ಮತ್ತೆ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಹುದೆಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಅದೇ ರೀತಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರದಿಂದ ಸ್ಪರ್ಧೆಗೆ ಇಳಿಯಲಿದ್ದಾರೆ. ಅಲ್ಲೂ ಕೂಡ ಗೆಲುವು ಅಷ್ಟೇನೂ ಸುಲಭವಾಗಿ ಕೈಗೆಟುಕುವುದಿಲ್ಲ. ಭಾರೀ ಹೋರಾಟ ನಡೆಸಲೇಬೇಕು. ಕುಮಾರಸ್ವಾಮಿ, ಯಡಿಯೂರಪ್ಪ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮೂವರು ಮುಂದಿನ ಮುಖ್ಯಮಂತ್ರಿಗಾಧೆ ಮೇಲೆ ಕಣ್ಣಿಟ್ಟಿರುವವರು. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನ ಪಡೆಯಲು ಕಸರತ್ತು ನಡೆಸುತ್ತಿರುವ ಇವರು, ತಮ್ಮ ಕ್ಷೇತ್ರಗಳಲ್ಲಿ ಗೆಲ್ಲಲು ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದಾರೆ.
ಈ ಕ್ಷೇತ್ರಗಳಲ್ಲಿ ಇವರನ್ನು ಸೋಲಿಸಲು ವಿರೋಧಿ ಪಡೆಗಳೂ ಕೂಡ ಅಷ್ಟೇ ಶ್ರಮ ಹಾಕುತ್ತಿವೆ. ಹಾಗಾಗಿ ಇವರು ಸ್ಪರ್ಧಿಸುವ ಕ್ಷೇತ್ರಗಳು ಹೈವೋಲ್ಟೇಜ್ ಕ್ಷೇತ್ರಗಳಾಗಿವೆ. ಪ್ರತಿದಿನ ಸುದ್ದಿಯಲ್ಲಿವೆ.