ಬರಪೀಡಿತ ಪ್ರದೇಶಗಳು ಘೋಷಣೆಯಾಗದಿದ್ದರೂ 10 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆ

ಬೆಂಗಳೂರು, ಏ.6-ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳು ಘೋಷಣೆಯಾಗದಿದ್ದರೂ 10 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಟ್ಯಾಂಕರ್‍ಗಳ ಮೂಲಕ ನೀರು ಪೂರೈಸಲಾಗುತ್ತಿದೆ.

ಬಿಸಿಲ ನಾಡು ಬಳ್ಳಾರಿ, ಸಕ್ಕರೆ ನಾಡು ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ 10 ಜಿಲ್ಲೆಗಳ 119 ಹಳ್ಳಿಗಳಿಗೆ ಟ್ಯಾಂಕರ್‍ಗಳ ಮೂಲಕ ನೀರು ಪೂರೈಸಲಾಗುತ್ತಿದೆ.

ನೀರಿನ ಅಭಾವ ಹೆಚ್ಚಾಗಿರುವ ಗ್ರಾಮಗಳಲ್ಲಿ ಖಾಸಗಿ ಬೋರ್‍ವೆಲ್‍ಗಳ ನೀರನ್ನು ಸರ್ಕಾರದ ವತಿಯಿಂದ ಪೂರೈಸಲು ಕ್ರಮ ಕೈಗೊಳ್ಳುತ್ತಿದ್ದು, ಇದೇ ರೀತಿ ಐದು ಜಿಲ್ಲೆಗಳ 127 ಖಾಸಗಿ ಬೋರ್‍ವೆಲ್‍ಗಳ ಮೂಲಕ ನೀರು ಪೂರೈಸಲಾಗುತ್ತಿದೆ. 119 ಗ್ರಾಮಗಳಿಗೆ ನಿತ್ಯ ಎರಡು ಬಾರಿಯಂತೆ 147 ಟ್ಯಾಂಕರ್‍ಗಳ ಮೂಲಕ ನೀರನ್ನು ಪೂರೈಸಲಾಗುತ್ತಿದೆ. ಮಲೆನಾಡು ಭಾಗದ ಚಿಕ್ಕಮಗಳೂರು ಜಿಲ್ಲೆಯ 53 ಗ್ರಾಮಗಳಲ್ಲಿ 56 ಟ್ಯಾಂಕ್‍ಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಕಳೆದ ವರ್ಷ ಭೀಕರ ಬರಗಾಲವಿದ್ದು, ಈ ವೇಳೆಗೆ 1143 ಗ್ರಾಮಗಳಿಗೆ 2 ಸಾವಿರ ಟ್ಯಾಂಕರ್‍ಗಳ ಮೂಲಕ ನೀರು ಪೂರೈಸಲಾಗುತ್ತಿತ್ತು. ಗೋಶಾಲೆ-ಮೇವಿನ ಬ್ಯಾಂಕ್ ಕೂಡ ತೆರೆಯಲಾಗಿತ್ತು.

ಕಳೆದ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾದ ಪರಿಣಾಮ ಬರಪೀಡಿತ ಪ್ರದೇಶಗಳ ಘೋಷಣೆ ಮಾಡಿಲ್ಲ. ಮೇವುಬ್ಯಾಂಕ್-ಗೋಶಾಲೆಗಳನ್ನು ಈ ಬಾರಿ ತೆರೆದಿಲ್ಲ. ಜಿಲ್ಲಾಧಿಕಾರಿಗಳ ಬಳಿ ಕುಡಿಯುವ ನೀರಿಗಾಗಿ 5ಕೋಟಿ ರೂ. ಒದಗಿಸಲಾಗಿದೆ.

ಜಿಲ್ಲಾ ಪಂಚಾಯ್ತಿಗಳಿಗೂ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಪ್ರತಿ ಜಿಲ್ಲೆಗೆ ಒಂದು ಕೋಟಿ ರೂ. ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 18 ಗ್ರಾಮಗಳಿಗೆ 40 ಟ್ಯಾಂಕ್‍ಗಳ ಮೂಲಕ ನಿತ್ಯ ಎರಡು ಬಾರಿ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5 ಗ್ರಾಮಗಳು, ಹಾಸನ-2, ಬಳ್ಳಾರಿ-2, ಮಂಡ್ಯ-17, ತುಮಕೂರು-10, ಉತ್ತರ ಕನ್ನಡ ಜಿಲ್ಲೆ -4, ಬೆಂಗಳೂರು ಗ್ರಾಮಾಂತರ ಹಾಗೂ ದಾವಣಗೆರೆಯ ಒಂದು ಜಿಲ್ಲೆಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ