ಭಯೋತ್ಪಾದನೆ ಚಟುವಟಿಕೆಗಳಿಗೆ ಬೆಂಬಲ: 1.2 ದಶಲಕ್ಷ ಟ್ವಿಟರ್ ಖಾತೆಗಳ ರದ್ದು

ಸ್ಯಾನ್‍ಫ್ರಾನ್ಸಿಸ್ಕೋ, ಏ.6-ಭಯೋತ್ಪಾದನೆ ಚಟುವಟಿಕೆಗಳಿಗೆ ಬೆಂಬಲ ಸೂಚಿಸಿದ್ದಕ್ಕಾಗಿ 2015ರ ಆಗಸ್ಟ್‍ನಿಂದ 1.2 ದಶಲಕ್ಷಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ರದ್ದುಗೊಳಿಸಲಾಗಿದೆ. ಭಯೋತ್ಪಾದನೆ ಪ್ರವರ್ತನೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲೇಖಿಸಿದ್ದಕ್ಕಾಗಿ ಜುಲೈ 1, 2017 ರಿಂದ ಡಿಸೆಂಬರ್ 31, 2017ರವರೆಗೆ ಒಟ್ಟು 2,74,460 ಖಾತೆಗಳನ್ನು ಶಾಶ್ವತವಾಗಿ ರದ್ದುಗೊಳಿಸಲಾಗಿದೆ ಎಂದು ಟ್ವಿಟರ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಆಗಸ್ಟ್ 2015 ರಿಂದ ಡಿಸೆಂಬರ್ 2017ರವರೆಗೆ ಭಯೋತ್ಪಾದನೆ ಚಟುವಟಿಕೆಗಳಿಗೆ ಬೆಂಬಲ ಮತ್ತು ಆ ವಿಷಯಗಳ ಪರ ಮಾಹಿತಿ ವಿನಿಮಯಕ್ಕೆ ಸಂಬಂಧಪಟ್ಟಂತೆ 12,10,357 ಟ್ವಿಟರ್ ಖಾತೆಗಳನ್ನು ರದ್ದುಗೊಳಿಸಲಾಗಿದೆ ಇವುಗಳಲ್ಲಿ ಕಳೆದ ವರ್ಷ 2,74,460 ಖಾತೆಗಳನ್ನು ಶಾಶ್ವತವಾಗಿ ಬಂದ್ ಮಾಡಲಾಗಿದೆ ಎಂದು ಮೈಕ್ರೋಬ್ಲಾಗಿಂಗ್ ಸಂಸ್ಥೆ ತಿಳಿಸಿದೆ.
ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಹತ್ತಿಕ್ಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಈ ಕಾರ್ಯ ಮುಂದುವರಿಯಲಿದೆ ಎಂದು ಟ್ವಿಟರ್ ಹೇಳಿದೆ.
ಅಮೆರಿಕದ ಕ್ಯಾಲಿಫೆÇೀರ್ನಿಯಾದ ಸ್ಯಾನ್‍ಫ್ರಾನ್ಸಿಸ್ಕೊದಲ್ಲಿ ಟ್ವಿಟರ್ ಮುಖ್ಯ ಕಚೇರಿ ಇದ್ದು, ವಿಶ್ವಾದ್ಯಂತ 25ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ.
ಟ್ವಿಟರ್ ಆನ್‍ಲೈನ್ ಸುದ್ದಿ ಮತ್ತು ಸಾಮಾಜಿಕ ಜಾಲತಾಣ ಸೇವೆಯಾಗಿದ್ದು, ಟ್ವಿಟ್‍ಗಳೆಂದು ಕರೆಯಲ್ಪಡುವ ಸಂದೇಶಗಳ ಮೂಲಕ ಗ್ರಾಹಕರು ಸುದ್ದಿ, ಸಂಗತಿಗಳನ್ನು ರವಾನಿಸಿ ಸಂವಾದ ನಡೆಸಬಹುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ವ್ಯಾಪಕವಾಗಿ ದುರುಪಯೋಗ ಆಗುತ್ತಿರುವ ಬಗ್ಗೆ ಅಸಂಖ್ಯಾತ ದೂರುಗಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ