ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ರಾಜ್ಯಕ್ಕೆ

ಬೆಂಗಳೂರು ,ಏ.6- ರಾಜ್ಯದಲ್ಲಿ ಶತಾಯ ಗತಾಯ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ದೃಢ ಸಂಕಲ್ಪ ಮಾಡಿರುವ ಕೇಂದ್ರ ಬಿಜೆಪಿ ನಾಯಕರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ತಂತ್ರಗಳ ನಿಪುಣ ರಾಮ್ ಮಾಧವ್ ಅವರನ್ನು ರಾಜ್ಯಕ್ಕೆ ಕಳುಹಿಸಿದೆ.
ಕಳೆದ ರಾತ್ರಿ ನಗರಕ್ಕೆ ಆಗಮಿಸಿರುವ ರಾಮ್ ಮಾಧವ್ ಆರ್‍ಎಸ್‍ಎಸ್ ನಾಯಕರ ಜೊತೆ ರಹಸ್ಯ ಮಾತುಕತೆ ನಡೆಸಿದರು.

ಅವರ ಭೇಟಿ ಎಷ್ಟು ರಹಸ್ಯವಾಗಿತ್ತೆಂದರೆ ಖುದ್ದು ಬಿಜೆಪಿ ನಾಯಕರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಅಷ್ಟರ ಮಟ್ಟಿಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗಿತ್ತು.
ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಆರ್‍ಎಸ್‍ಎಸ್ ನಾಯಕರ ಜೊತೆ ಚುನಾವಣಾ ಕಾರ್ಯ ತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಮುಂದಿನ ದಿನಗಳಲ್ಲಿ ಪ್ರಣಾಳಿಕೆ ಸಿದ್ಧಪಡಿಸುವುದು, ರಾಷ್ಟ್ರೀಯ ನಾಯಕರ ಪ್ರವಾಸ ನಿಗದಿ, ಪ್ರಚಾರದ ಕಾರ್ಯಶೈಲಿ, ಅಭ್ಯರ್ಥಿಗಳ ಆಯ್ಕೆ , ಯಾವ ಯಾವ ಸ್ಥಳಗಳಲ್ಲಿ ಯಾವ ವಿಷಯಗಳಿಗೆ ಆದ್ಯತೆ ನೀಡುವುದು ಸೇರಿದಂತೆ ಪಕ್ಷದ ಗೆಲುವಿಗೆ ಅಗತ್ಯ ಕಾರ್ಯತಂತ್ರ ಹೆಣೆಯಲಿದ್ದಾರೆ.

ಸಾಮಾನ್ಯವಾಗಿ ರಾಮ್ ಮಾಧವ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತೀರಾ ವಿರಳ. ತೆರೆ ಮರೆಯಲ್ಲಿ ಕುಳಿತು ಅವರು ರೂಪಿಸುವ ರಣ ತಂತ್ರಗಳು ವಿಪಕ್ಷಗಳನ್ನೇ ನಿದ್ದೆಗೆಡುವಂತೆ ಮಾಡುತ್ತವೆ.
ಇಂದು ರಾಮ್ ಮಾಧವ್ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಪ್ರಮುಖರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ , ಆರ್.ಅಶೋಕ್, ಬಿ.ಎಲ್.ಸಂತೋಷ್ ಸೇರಿದಂತೆ ಆರ್‍ಎಸ್‍ಎಸ್ ನಾಯಕರು ಹಾಗೂ ಪಕ್ಷದ ಪ್ರಮುಖರ ಜೊತೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ.
ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿರುವ ರಾಮ್ ಮಾಧವ್ ಎದುರಾಳಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಶಕ್ತಿ ಹಾಗೂ ದೌರ್ಬಲ್ಯಗಳ ಬಗ್ಗೆಯೂ ಸ್ಥಳೀಯರಿಂದ ಮಾಹಿತಿ ಪಡೆಯುವರು.

ಪ್ರಧಾನಿ ನರೇಂದ್ರ ಮೋದಿ ಯಾವ ಭಾಗದಲ್ಲಿ ಪ್ರಚಾರ ನಡೆಸಿದರೆ ಪಕ್ಷಕ್ಕೆ ಅನುಕೂಲವಾಗಲಿದೆ. ಪಕ್ಷ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ , ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಯಾವ ಯಾವ ಪ್ರದೇಶಗಳಲ್ಲಿ ಪ್ರಚಾರ ನಡೆಸಬೇಕು, ಹಿಂದುತ್ವದ ಅಸ್ತ್ರ ಬಳಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೇಗೆ ಬಳಸಿಕೊಳ್ಳಬೇಕು, ಪ್ರದೇಶವಾರು, ಜಾತಿವಾರು ಸೇರಿದಂತೆ ರಾಜ್ಯದ ಸ್ಥಿತಿಗತಿಗಳ ಬಗ್ಗೆ ಇಂಚಿಂಚು ಮಾಹಿತಿ ಪಡೆಯುವರು.
ರಾಜ್ಯದಲ್ಲಿ ಮೋದಿ ಅಲೆ ನಡೆಯಲಿದೆಯೇ, ಮತದಾರರ ನಾಡಿ ಮಿಡಿತ, ಯಾವ ಯಾವ ಪಕ್ಷಗಳ ಸ್ಥಿತಿಗತಿ ಹೇಗಿದೆ ಎಂಬುದನ್ನು ಅವರದೇ ಮೂಲದಿಂದ ಮಾಹಿತಿ ಪಡೆದು ತಮ್ಮದೇ ಆದ ರಣತಂತ್ರವನ್ನು ರೂಪಿಸುವರು.

ಯಾರು ರಾಮ್ ಮಾಧವ್:
ಒಂದು ಕಾಲದಲ್ಲಿ ಆರ್‍ಎಸ್‍ಎಸ್‍ನ ಸಾಮಾನ್ಯ ಕಾರ್ಯಕರ್ತನಾಗಿದ್ದ ರಾಮ್ ಮಾಧವ್ ನಂತರ ಹಂತ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾಗೆ ಆತ್ಮೀಯರಾದರು.
ಜಮ್ಮಿಕಾಶ್ಮೀರದಲ್ಲಿ ಪಕ್ಷದ ಉಸ್ತುವಾರಿಯಾಗಿ ನೇಮಕಗೊಂಡಿದ್ದ ರಾಮ್ ಮಾಧವ್ ಕಣಿವೆ ರಾಜ್ಯದಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗಳಿಸಲು ಕಾರಣೀಭೂತರಾದರು. ಅಲ್ಲದೆ ಪಿಡಿಪಿ ಜೊತೆ ಮೈತ್ರಿ ಸರ್ಕಾರ ರಚಿಸುವಲ್ಲೂ ಇವರ ಪಾತ್ರ ನಿರ್ಣಾಯಕವಾಗಿತ್ತು.
ಜಮ್ಮು ಕಾಶ್ಮೀರದಲ್ಲಿ ಯಾತ್ರೆ ಮುಗಿಸಿದ ಬಳಿಕ ರಾಮ್ ಮಾಧವರನ್ನು ಈಶಾನ್ಯ ರಾಜ್ಯ ಅಸ್ಸಾಂಗೆ ನಿಯೋಜನೆ ಮಾಡಿತು.

ಕಾಂಗ್ರೆಸ್‍ನ ಭದ್ರ ಕೋಟೆಯಾಗಿದ್ದ ಅಸ್ಸಾಂನಲ್ಲಿ ಬಿಜೆಪಿ 2016ರಲ್ಲಿ ಸರ್ಕಾರ ರಚಿಸುವ ಹಂತಕ್ಕೆ ಬಂದಿದ್ದು , ರಾಮ್ ಮಾಧವ್ ಅವರ ಪರಿಶ್ರಮದಿಂದಲೇ.
ಸತತ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ತರುಣ್ ಗೋಗಯ್ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಧೂಳಿಪಟ ಮಾಡಿ ಬಿಜೆಪಿಯ ಕಮಲ ಅರಳುವಂತೆ ಮಾಡಿದ್ದರಲ್ಲಿ ಇವರ ಪರಿಶ್ರಮವಿತ್ತು.

ಹೀಗೆ ಅಸ್ಸಾಂನಲ್ಲಿ ತಮ್ಮ ಜೈತ್ರಾ ಯಾತ್ರೆ ಮುಂದುವರೆಸಿದ ರಾಮ್ ಮಾಧವ್ ಇತ್ತೀಗೆಷ್ಟೇ ನಡೆದ ಈಶಾನ್ಯ ರಾಜ್ಯ ತ್ರಿಪುರದಲ್ಲೂ ಅಲ್ಲಿನ ಸಿಎಂಪಿ ಪಕ್ಷವನ್ನು ಧೂಳಿಪಟ ಮಾಡಿ ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು.
ಹೀಗೆ ಅವರು ಎಲ್ಲೆ ಹೋದರೂ ಪಕ್ಷಕ್ಕೆ ಗೆಲುವು ಶತಸಿದ್ದ ಎಂಬ ನಂಬಿಕೆ ಬಿಜೆಪಿ ವಲಯದಲ್ಲಿದೆ. ಮೂಲತಃ ಆಂಧ್ರಪ್ರದೇಶದವರಾಗಿರುವ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿರುವ ಅವರು ಇತ್ತೀಚೆಗಷ್ಟೇ ಪುಸ್ತಕವೊಂದನ್ನು ಬರೆದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ