ಬೆಂಗಳೂರು, ಏ.6- ವಿಶಾಲವಾದ ಹವಾ ನಿಯಂತ್ರಿತ ಕೊಠಡಿ, 20ಕ್ಕೂ ಹೆಚ್ಚು ಟಿವಿಗಳು, ರೇಡಿಯೋಗಳು, ದಿನಪತ್ರಿಕೆಗಳು, ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ 65 ಸಿಬ್ಬಂದಿಗಳು, ಇವರ ಮೇಲುಸ್ತುವಾರಿಗೆ 25 ಅಧಿಕಾರಿಗಳ ತಂಡ. ಇದು ಕಾಸಿಗಾಗಿ ಸುದ್ದಿ ಪ್ರಕಟಿಸುವ ಮಾಧ್ಯಮಗಳ ಮೇಲೆ ಹದ್ದಿನ ಕಣ್ಣಿಡಲು ಬಿಬಿಎಂಪಿಯಲ್ಲಿ ರಚನೆಯಾಗಿರುವ ಮಾಧ್ಯಮ ಕೋಶ.
ಜಿಲ್ಲಾ ಚುನಾವಣಾಧಿಕಾರಿಗಳೇ ಅಧ್ಯಕ್ಷರಾಗಿರುವ ಮಾಧ್ಯಮ ಕೋಶ ಬಿಬಿಎಂಪಿಯ ಅನೆಕ್ಸ್ ಕಟ್ಟಡದಲ್ಲಿ ರಚನೆಯಾಗಿದ್ದು, ಪ್ರತಿನಿತ್ಯ 65 ಸಿಬ್ಬಂದಿ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಂಜುನಾಥ್ ಪ್ರಸಾದ್ ಅವರು ಅಧ್ಯಕ್ಷರಾಗಿರುವ ಮಾಧ್ಯಮ ಕೋಶ ರಚನಾ ಸಮಿತಿಯಲ್ಲಿ ವಿಶೇಷ ಆಯುಕ್ತ ರವೀಂದ್ರ, ವಾರ್ತಾ ಇಲಾಖೆಯ ಅಧಿಕಾರಿಗಳು, ಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುರೇಶ್, ಹಿರಿಯ ಪತ್ರಕರ್ತರು ಸೇರಿದಂತೆ ಒಟ್ಟು 25 ಅಧಿಕಾರಿಗಳ ತಂಡ ಮೇಲುಸ್ತುವಾರಿ ನೋಡಿಕೊಳ್ಳಲಿದೆ.
ಮಾಧ್ಯಮ ಕೋಶ ಪ್ರಭಾವಶಾಲಿಯಾಗಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ 65 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 2ರ ವರೆಗೆ, 2 ರಿಂದ ರಾತ್ರಿ 10ರ ವರೆಗೆ ಹಾಗೂ ರಾತ್ರಿ 10 ರಿಂದ ಬೆಳಗಿನ ಜಾವ 6ರ ವರೆಗೆ ಮೂರು ಪಾಳಿಯಲ್ಲಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ.
ಪ್ರತಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಪ್ರತಿಯೊಂದು ಚಾನೆಲ್ಗಳಲ್ಲಿ ಬಿತ್ತರಗೊಳ್ಳುವ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಪಟ್ಟಿ ಮಾಡಬೇಕು. ಆಯಾ ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಗಮನಿಸಿ ಕಾಸಿಗಾಗಿ ಸುದ್ದಿ ಹಾಕಿರುವ ವಿಷಯ ಗಮನಕ್ಕೆ ಬಂದರೆ ಆಯಾ ಪತ್ರಿಕೆಗಳ ಕಟಿಂಗ್ಗಳನ್ನು ಸಂಗ್ರಹಿಸಬೇಕು.
ಪಾಳಿ ಮುಗಿದ ಸಿಬ್ಬಂದಿಗಳು ಮುಂದಿನ ಪಾಳಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ತಮ್ಮ ಕಾರ್ಯಭಾರವನ್ನು ವಹಿಸಬೇಕು ಹಾಗೂ ಆಯಾ ದಿನಗಳ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ವರದಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಮಾಧ್ಯಮ ಕೋಶದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಬೇಜವಾಬ್ದಾರಿತನ ತೋರಿದರೆ ಅಂತಹವರಿಗೆ ಯಾವುದೇ ನೋಟಿಸ್ ನೀಡದೆ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಅವರು ಎಚ್ಚರಿಕೆ ನೀಡಿದ್ದಾರೆ.