ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ 2017-18ನೆ ವರ್ಷದಲ್ಲಿ 29.95 ಕೋಟಿ ರೂ. ಸಂಗ್ರಹ

ಮೈಸೂರು, ಏ.6- ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ 2017-18ನೆ ವರ್ಷದಲ್ಲಿ 29.95 ಕೋಟಿ ರೂ. ಸಂಗ್ರಹವಾಗಿದೆ.
ಭಕ್ತರ ಕಾಣಿಕೆ ದೇವಾಲಯ ಪ್ರವೇಶ ಸೇರಿದಂತೆ ವಿವಿಧ ಮೂಲಗಳಿಂದ 29,95,17,646ರೂ. ಸಂಗ್ರಹವಾಗಿದೆ ಎಂದು ಚಾಮುಂಡೇಶ್ವರಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಕಳೆದ ವರ್ಷಕ್ಕಿಂತ ಈ ವರ್ಷ 24.30ರಷ್ಟು ಆದಾಯ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಕಾಣಿಕೆ ಹುಂಡಿಯಲ್ಲಿ 10,25,37,945ರೂ., ವಿಶೇಷ ಪ್ರವೇಶ ಶುಲ್ಕ (30ರೂ.) ದಿಂದ 2,37,32,530ರೂ., ನೇರ ಪ್ರವೇಶ ಶುಲ್ಕ (100ರೂ.) ದಿಂದ 7,47,41,926ರೂ. ಸಂಗ್ರಹವಾಗಿದೆ.

ಮನಿಯಾರ್ಡರ್, ಡಿಡಿ ಹಾಗೂ ಧನಾದೇಶಗಳ ಮೂಲಕ 18 ಲಕ್ಷ ರೂ. ಹಾಗೂ ದೇವಾಲಯದ ವಿವಿಧ ಗುತ್ತಿಗೆಗಳಿಂದ 36.51 ಲಕ್ಷ ರೂ., ಲಾಡು-ಪ್ರಸಾದ ಮಾರಾಟದಿಂದ 3.59 ಕೋಟಿ, ದೇವತೆಗಳ ಮೆರವಣಿಗೆ ಸೇವೆ ಸೇರಿದಂತೆ ಇನ್ನಿತರ ಸೇವೆಗಳಿಂದ 6.32 ಲಕ್ಷ ರೂ. ಸಂಗ್ರಹವಾಗಿದೆ.

ಸೀರೆಗಳ ಹರಾಜು ಮತ್ತು ಮಾರಾಟದಿಂದ 1.74 ಕೋಟಿ ರೂ. ಸಂಗ್ರಹವಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇವಾಲಯಗಳಿಗೆ ಬರುವ ಭಕ್ತರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ನೇರ ಪ್ರವೇಶ ಶುಲ್ಕ ಪಡೆಯುವ ಭಕ್ತರಿಗೆ ಲಾಡು ಹಾಗೂ ಕುಂಕುಮ ಪ್ರಸಾದ ವಿತರಣೆ ಹಾಗೂ ಭಕ್ತಾದಿಗಳ ಅನುಕೂಲಕ್ಕಾಗಿ ಮಧ್ಯಾಹ್ನ ದಾಸೋಹದ ಜತೆಗೆ ಬೆಳಗ್ಗೆ ಮತ್ತು ಸಂಜೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ