ನವದೆಹಲಿ, ಏ.6-ಬ್ಯಾಂಕುಗಳಿಂದ ಭಾರೀ ಮೊತ್ತದ ಸಾಲಗಳನ್ನು ಪಡೆದು ವಂಚಿಸುತ್ತಿರುವ ಪ್ರಕರಣಗಳು ಒಂದೊಂದೇ ಬೆಳಕಿಗೆ ಬರುತ್ತಿದ್ದು, 2,700 ಕೋಟಿ ರೂ.ಗಳ ಮತ್ತೊಂದು ದೊಡ್ಡ ಹಗರಣವೊಂದರ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದೆ. ಗುಜರಾತ್‍ನ ವಡೋದರ ಮೂಲದ ಡೈಮಂಡ್ ಪವರ್ ಇನ್‍ಫ್ರಾಸ್ಟ್ರಕ್ಚರ್ ಲಿಮಿಟೆಡ್(ಡಿಪಿಐಎಲ್) 11 ವಿವಿಧ ಬ್ಯಾಂಕುಗಳಿಗೆ ಒಟ್ಟು 2,654.40 ಕೋಟಿ ರೂ.ಗಳ ಸಾಲಗಳನ್ನು ಪಡೆದು ಮರು ಪಾವತಿ ಮಾಡದೆ ವಂಚಿಸಿದೆ. ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು ಡಿಪಿಐಎಲ್ ಹಾಗೂ ಅದರ ಮಾಲೀಕರಾದ ಸುರೇಶ್ ನಾರಾಯಣ್ ಭಟ್ನಾಗರ್ ಮತ್ತು ಮಕ್ಕಳಾದ ಅಮಿತ್ ಮ್ತು ಸುಮಿತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕಂಪನಿಯು 2008ರಿಂದಲೂ ಅಕ್ರಮವಾಗಿ ಸಾಲಗಳನ್ನು ಪಡೆಯುತ್ತಿದ್ದು, ಜೂನ್ 29, 2016ರಂತೆ ಒಟ್ಟು 2,654.40 ಕೋಟಿ ರೂ.ಗಳ ಸಾಲವನ್ನು ಬಾಕಿ ಇರಿಸಿಕೊಂಡಿದೆ. ಸಾರ್ವನಿಕ ಮತ್ತು ಖಾಸಗಿ ಸೇರಿದಂತೆ ಒಟ್ಟು 12 ಬ್ಯಾಂಕ್‍ಗಳಿಂದ ಸಾಲ ಪಡೆದು ಉದ್ದೇಶಪೂರ್ವಕ ಸುಸ್ತಿದಾರರಾಗಿದ್ದು, ವಂಚಿಸಿದ್ದಾರೆ ಎಂಬ ಆರೋಪಗಳಿವೆ.
ಎಲೆಕ್ಟ್ರಿಕ್ ಕೇಬಲ್ ಮತ್ತು ಇತರ ಸಾಧನ-ಉಪಕರಣಗಳನ್ನು ತಯಾರಿಸುವ ಈ ಸಂಸ್ಥೆ ಆಕ್ಸಿಸ್ ಬ್ಯಾಂಕ್ ಬ್ಯಾಂಕ್ ಆಫ್ ಇಂಡಿಯಾ. ಬ್ಯಾಂಕ್ ಆಫ್ ಬರೋಡಾ, ಐಸಿಐಸಿಐ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ದೇನಾ ಬ್ಯಾಂಕ್, ಎಸ್‍ಬಿಐ ಮತ್ತು ಕಾಪೆರ್Çರೇಷನ್ ಬ್ಯಾಂಕ್ ಸೇರಿದಂತೆ ಒಟ್ಟು 11 ಬ್ಯಾಂಕ್‍ಗಳಿಗೆ ವಂಚಿಸಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸಿಬಿಐ ಅಧಿಕಾರಿಗಳು ಈಗಾಗಲೇ ವಡೋದರಾ ಸೇರಿದಂತೆ ಹಲವಾರು ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಿ ಈ ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.