ಮೇಕೆ ರಕ್ಷಣೆಗಾಗಿ ಹಳ್ಳಿ ಹುಡುಗಿಯೊಬ್ಬಳು ಹುಲಿಯೊಂದಿಗೆ ಹೋರಾಟ!

ಬಾಂದ್ರಾ, ಏ.6- ತನ್ನ ಮೇಕೆ ರಕ್ಷಣೆಗಾಗಿ ಹಳ್ಳಿ ಹುಡುಗಿಯೊಬ್ಬಳು ಹುಲಿಯೊಂದಿಗೆ ಕೋಲಿನಿಂದ ಹೋರಾಡಿ ವ್ಯಾಘ್ರನನ್ನು ಹಿಮ್ಮೆಟ್ಟಿಸಿದ ಘಟನೆ ಪಶ್ಚಿಮ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ನಡೆದಿದೆ. ಈ ಯುವತಿಯ ಸಾಹಸ ಮತ್ತು ಶೌರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಸಕೋಲಿ ತಾಲ್ಲೂಕಿನ ಉಸ್‍ಗಾಂವ್ ಗ್ರಾಮದ ರೂಪಾಲಿ ಮೆಶ್ರೂಮ್ ಹುಲಿಯೊಂದಿಗೆ ಹೊರಡಿದ ದಿಟ್ಟ ಸಾಹಸಿ. ಕಳೆದ ವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತನ್ನ ಮನೆಯಲ್ಲಿದ್ದಾಗ ಮೇಕೆಯೊಂದು ಚೀರಾಡುವ ಸದ್ದು ಕೇಳಿ ರೂಪಾಲಿ ಮನೆಯಿಂದ ಹೊರಗೆ ಬಂದಳು. ಅದೇ ಸಂದರ್ಭದಲ್ಲಿ ದೊಡ್ಡ ಹುಲಿಯೊಂದು ಮೇಕೆ ಬೇಟೆಗೆ ಹೊಂಚು ಹಾಕಿ ದಾಳಿ ನಡೆಸಿತು. ತಕ್ಷಣ ಅಲ್ಲೇ ಇದ್ದ ದೊಣ್ಣೆಯನ್ನು ತೆಗೆದುಕೊಂಡು ಹುಲಿಯತ್ತ ಎಸೆದಳು.
ಇದರಿಂದ ರೋಷಗೊಂಡ ಹುಲಿ ಘರ್ಜಿಸಿತು. ಇನ್ನೊಂದು ದೊಣ್ಣೆಯಿಂದ ವ್ಯಾಘ್ರನಿಗೆ ರೂಪಾಲಿ ಹೊಡೆಯಲು ಆರಂಭಿಸಿದಳು. ಹುಲಿ ಹೆದರಿ ಓಡಿಹೋಗುವುದಕ್ಕೂ ಮುನ್ನ ಆಕೆಯ ಮೇಲೆ ಎರಗಿತು. ಸದ್ದು ಕೇಳಿ ಮನೆಯಲ್ಲಿದ್ದ ತಾಯಿ ಹೊರಗೆ ಬಂದು ಮಗಳ ನೆರವಿಗೆ ಧಾವಿಸಿದರು. ಈ ಸಂದರ್ಭದಲ್ಲಿ ಹುಲಿ ಓಡಿ ಹೋಯಿತು. ವ್ಯಾಘ್ರನ ದಾಳಿಯಲ್ಲಿ ರೂಪಾಲಿ ತಲೆ, ಕೆನ್ನೆ, ತುಟಿ, ಸೊಂಟ ಮತ್ತು ಕೈಕಾಲುಗಳಿಗೆ ಗಾಯಗಳಾಗಿವೆ. ತಾಯಿಯೂ ಗಾಯಗೊಂಡಿದ್ದಾರೆ. ಆದರೆ ದಾಳಿಗೆ ಒಳಗಾದ ಮೇಕೆ ಸಾವನ್ನಪ್ಪಿದೆ. ರೂಪಾಲಿ ಹುಲಿಯೊಂದಿಗೆ ಸೆಣಸಿದ ನಂತರ ಆಕೆಯ ರಕ್ತಸಿಕ್ತ ಮುಖ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುವತಿಯ ಸಾಹಸದ ಬಗ್ಗೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ