ಬಾಬು ಜಗಜೀವನರಾಮ್ ಅವರನ್ನು ಒಂದು ಜನಾಂಗದ ನಾಯಕನೆಂದು ಬಿಂಬಿಸುವ ರಾಜಕಾರಣವನ್ನು ಜೆಡಿಎಸ್ ಎಂದೂ ಮಾಡಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ

ಬೆಂಗಳೂರು,ಏ.5-ಡಾ.ಬಾಬು ಜಗಜೀವನರಾಮ್ ಅವರನ್ನು ಒಂದು ಜನಾಂಗದ ನಾಯಕನೆಂದು ಬಿಂಬಿಸುವ ರಾಜಕಾರಣವನ್ನು ಜೆಡಿಎಸ್ ಎಂದೂ ಮಾಡಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ಜೆಡಿಎಸ್‍ನ ಜೆಪಿ ಭವನದಲ್ಲಿಂದು ಪಕ್ಷದ ಎಸ್ಸಿ-ಎಸ್ಟಿ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ಜನ್ಮ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗಜೀವನರಾಮ್ ಅವರು ಓರ್ವ ಜನ ನಾಯಕ ಹಾಗೂ ರಾಷ್ಟ್ರ ನಾಯಕರಾಗಿದ್ದವರು. ರಕ್ಷಣಾ ಸಚಿವರಾಗಿದ್ದಾಗ ಪಾಕಿಸ್ತಾನದ ಮೇಲೆ ನಡೆದ ಯುದ್ಧದಲ್ಲಿ ಭಾರತ ಜಯಗಳಿಸಿತ್ತು. ಅವರು ಕೃಷಿ ಸಚಿವರಾಗಿದ್ದಾಗ ದೇಶದಲ್ಲಿ ಹಸಿರು ಕ್ರಾಂತಿ ನಡೆಸಿದ್ದರು. ಅವರ ಬಗ್ಗೆ ಮಾತನಾಡುವ ನೈತಿಕ ಶಕ್ತಿ ದೇವೇಗೌಡರಿಗೆ ಮಾತ್ರ ಇದೆ ಎಂದರು.

ಬಾಬು ಜಗಜೀವನರಾಮ್ ಅವರ ವಿಚಾರಧಾರೆಗಳನ್ನು ದೇವೇಗೌಡರು ಅನುಷ್ಠಾನಕ್ಕೆ ತಂದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅವರೊಬ್ಬ ದಕ್ಷ ಆಡಳಿತಗಾರರಾಗಿದ್ದರು. ಕಾಂಗ್ರೆಸ್‍ನಿಂದ ಹೊರಬಂದ ಮೇಲೆ ಅವರೇ ಸ್ವತಃ ಕಾಂಗ್ರೆಸಿಗರನ್ನು ರಣಹದ್ದು ಎಂದು ಕರೆಯತ್ತಿದ್ದರು ಎಂದು ಟೀಕಿಸಿದರು.
ಅಧಿಕಾರದ ಮದದಿಂದ ಮನಬಂದಂತೆ ಪ್ರತಿಮೆಗಳನ್ನು ನಿರ್ಮಾಣ ಮಾಡಿ ಸಮುದಾಯದ ನಾಯಕರನ್ನು ಬಿಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಈ ವೇಳೆ ಬಾಬು ಜಗಜೀವನರಾಮ್ ಕುರಿತಂತೆ ಹಂಪಿ ವಿವಿ ವಿಶ್ರಾಂತ ಕುಲಪತಿ ಹಿ.ಚಿ.ಬೋರಲಿಂಗಯ್ಯ ವಿಚಾರ ಮಂಡಿಸಿದರು. ವಿಧಾನಪರಿಷತ್ ಸದಸ್ಯ ಚೌಡರೆಡ್ಡಿ , ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಆನಂದ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ