ವಿಧಾನಸಭೆ ಚುನಾವಣೆಯಲ್ಲಿ ಯಾರನ್ನೂ ಬೇಕಾದರೂ ಸೋಲಿಸುವ ಶಕ್ತಿ ನಮಗೂ ಇದೆ.ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಏ.5- ವಿಧಾನಸಭೆ ಚುನಾವಣೆಯಲ್ಲಿ ಯಾರನ್ನೂ ಬೇಕಾದರೂ ಸೋಲಿಸುವ ಶಕ್ತಿ ನಮಗೂ ಇದೆ. ಆದರೆ, ನಾವು ಯಾರನ್ನೂ ಗುರಿಯಾಗಿಟ್ಟುಕೊಂಡು ಸೋಲಿಸುವ ಮಾತನಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಬಾಬುಜಗಜೀವನರಾಮ್ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳನ್ನು ಬಿಟ್ಟು ನನ್ನ ಕ್ಷೇತ್ರದ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಚರ್ಚೆಗಳು ವಾಸ್ತವತೆ ನೆಲೆಗಟ್ಟಿನಲ್ಲಿರಬೇಕು. ನಕಾರಾತ್ಮಕವಾಗಿ ಇರಬಾರದು. ಕುಮಾರಸ್ವಾಮಿ, ದೇವೇಗೌಡ ಅವರು ಸಿದ್ದರಾಮಯ್ಯನನ್ನು ಸೋಲಿಸುತ್ತೇವೆ ಎಂದಾಕ್ಷಣ ಅದನ್ನು ವೈಭವೀಕರಿಸ ಬಾರದು ಎಂದರು.

ನನ್ನನ್ನು ಸೋಲಿಸಲು ಜೆಡಿಎಸ್ ಮತ್ತು ಬಿಜೆಪಿ ಒಂದಾಗಿವೆ. ಈ ಹಿಂದೆ 2006ರ ಚುನಾವಣೆಯಲ್ಲೂ ಈ ಎರಡೂ ಪಕ್ಷಗಳು ಒಂದಾಗಿದ್ದವು. ಆಗಲೂ ನಾನೇ ಗೆದ್ದಿದ್ದೆ. ಈಗಲೂ ನಾನೇ ಗೆಲ್ಲುತ್ತೇನೆ ಎಂದು ಹೇಳಿದರು.
ನನ್ನ ಗುರಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು. ಹಾಗಾಗಿ ಸಿದ್ಧಾಂತ ಆಧಾರಿತವಾಗಿ ನಾನು ಚುನಾವಣೆಯನ್ನು ಎದುರಿಸುತ್ತೇನೆ. ಯಾರನ್ನೂ ವೈಯಕ್ತಿವಾಗಿ ಗುರಿಯಾಗಿಟ್ಟುಕೊಳ್ಳುವುದಿಲ್ಲ ಎಂದು ಹೇಳಿದರು.

ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಕೇವಲ ನನ್ನನ್ನಷ್ಟೇ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ಈವರೆಗೂ ಬಿಜೆಪಿ ವಿರುದ್ಧ ಒಂದು ಮಾತನ್ನೂ ಆಡಿಲ್ಲ. ನನ್ನನ್ನು ಪ್ರಮುಖ ಅಭ್ಯರ್ಥಿ ಎಂದು ಪರಿಗಣಿಸುವುದಾದರೆ ಅದಕ್ಕೆ ಆಕ್ಷೇಪವಿಲ್ಲ. ಆದರೆ ಚರ್ಚೆಗಳು ವಾಸ್ತವತೆಯನ್ನು ಬಿಟ್ಟು ನಕಾರಾತ್ಮಕವಾಗಿರಬಾರದು ಎಂದು ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧೆ:
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ನಾನು ಅವರಂತೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಯಾವ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯಕ್ಕೆ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿದ್ದೇನೆ. ಉಳಿದಂತೆ ಕುಷ್ಠಗಿ, ಬಾಲ್ಕಿ, ಕೊಪ್ಪಳ, ಬಾದಾಮಿ, ಕೋಲಾರ, ಬೀಳಗಿ, ಚಿತ್ರದುರ್ಗ ಸೇರಿದಂತೆ ಹಲವಾರು ಕ್ಷೇತ್ರಗಳಿಂದ ನನಗೆ ಬೇಡಿಕೆಗಳು ಬಂದಿದ್ದು, ನಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿ ಎಂದು ಮುಖಂಡರು, ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ನಾನು ಈವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.
ಬೆಂಗಳೂರಿನ ಯಾವುದಾದರು ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ನಾನು ಎಲ್ಲಿಯೂ ಹೇಳಿಲ್ಲ. ಅಂತಹ ಪ್ರಸ್ತಾವನೆಗಳು ನನ್ನ ಮುಂದೆ ಬಂದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಏ.13,14ರಂದು ಕಾಂಗ್ರೆಸ್ ಪಟ್ಟಿ ಬಿಡುಗಡೆ:
ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ಈಗಾಗಲೇ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಸಿ ಪ್ಯಾನಲ್ ಲಿಸ್ಟ್ ಸಿದ್ಧ ಪಡಿಸಿದೆ. ಅದರಲ್ಲಿ ಕೆಲವು ಕ್ಷೇತ್ರಗಳಿಗೆ 2,3,5 ಹೀಗೆ ಹಲವಾರು ಹೆಸರುಗಳನ್ನು ಪಟ್ಟಿ ಮಾಡಲಾಗಿದೆ. ಅಭ್ಯರ್ಥಿಗಳ ಆಯ್ಕೆ ಮೂರು ಹಂತದಲ್ಲಿ ನಡೆಯಲಿದ್ದು, ರಾಜ್ಯ ಚುನಾವಣಾ ಸಮಿತಿ, ಎಐಸಿಸಿ ಸ್ಕ್ರೀನಿಂಗ್ ಕಮಿಟಿ ಮತ್ತು ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುತ್ತದೆ.
ಸ್ಕ್ರೀನಿಗ್ ಕಮಿಟಿ ಬಹುತೇಕ ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸುತ್ತದೆ. ಅಂತಿಮವಾಗಿ ರಾಹುಲ್‍ಗಾಂಧಿ ನೇತೃತ್ವದ ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿಗಳ ಆಯ್ಕೆಯನ್ನು ನಿರ್ಧರಿಸುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಏ.13, 14ರೊಳಗೆ ಪೂರ್ಣಗೊಳ್ಳಲಿವೆ ಎಂದು ಹೇಳಿದರು.

ಅಧಿಕಾರ ದುರುಪಯೋಗ ಮಾಡಿಲ್ಲ:
ಚುನಾವಣೆಯಲ್ಲಿ ಗೆಲ್ಲಲು ಹಣ ಹಂಚುವುದು, ಪೆÇಲೀಸರು ಹಾಗೂ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ನನ್ನ ರಾಜಕೀಯ ಜೀವನದಲ್ಲಿ ಮಾಡಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಯಾಗಿದ್ದಾಗ ಮಾಡಿದ್ದ ಕೆಲಸಗಳ ಅನುಭವದ ಆಧಾರದ ಮೇಲೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನಾನು ಯಾವುದೇ ಪೆÇಲೀಸ್ ವಾಹನದಲ್ಲಿ ಹಣ ಸಾಗಿಸಿಲ್ಲ. ಯಾವ ಅಧಿಕಾರಿಗಳನ್ನೂ ಬಳಸಿಕೊಂಡಿಲ್ಲ. ಚುನಾವಣಾ ಆಯೋಗ ಇಂಥದ್ದಕ್ಕೆಲ್ಲಾ ಅನುಮತಿ ನೀಡುವುದಿಲ್ಲ ಎಂದು ಹೆಚ್ಚು ಅನುಭವಿ ರಾಜಕಾರಣಿಯಾದ ದೇವೇಗೌಡರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯದ ಆಡಳಿತ ಸುಗಮವಾಗಿ ನಡೆಯಬೇಕು ಎಂಬ ಹಿನ್ನೆಲೆಯಲ್ಲಿ ಮುಖ್ಯಕಾರ್ಯದರ್ಶಿ ಅವರು ಪ್ರತಿ ದಿನ ನನ್ನನ್ನು ಭೇಟಿ ಮಾಡುತ್ತಾರೆ. ಅದನ್ನು ಹೊರತು ಪಡಿಸಿ ಇನ್ಯಾವುದೇ ಅಧಿಕಾರಿಗಳು ನನ್ನನ್ನು ಭೇಟಿ ಮಾಡುತ್ತಿಲ್ಲ. ಭೇಟಿ ಮಾಡಿ ಎಂದು ನಾನು ಯಾರನ್ನೂ ಕರೆಯುವುದಿಲ್ಲ. ಅಧಿಕಾರ ದುರುಪಯೋಗ ಪಡಿಸಿಕೊಂಡು ಚುನಾವಣೆ ಎದುರಿಸುವುದನ್ನು ನನ್ನ ರಾಜಕೀಯದಲ್ಲಿ ಎಂದೂ ಮಾಡುವುದಿಲ್ಲ.

ಬಿಜೆಪಿ ಮತ್ತು ಜೆಡಿಎಸ್ ಪರವಾಗಿ ಮೈಸೂರಿನಲ್ಲಿ ಅನುಮತಿ ಇಲ್ಲದೆ ಅನಧಿಕೃತವಾಗಿ ಕೆಲವು ವಾಹನಗಳು ಓಡಾಡುತ್ತಿವೆ. ಅಂತಹ ವಾಹನಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಕಾನೂನು ಪಾಲನೆ ಮಾಡುವುದು ತಪ್ಪು ಎಂದು ಹೇಳುವುದು ಹೇಗೆ ? ವಿರೋಧ ಪಕ್ಷಗಳ ನಾಯಕರು ಅಂತಹ ಅಧಿಕಾರಿಗಳಿಗೆ ಧಮ್ಕಿ ಹಾಕುವುದು ಸರಿಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಭ್ರಮೆಯಲ್ಲಿ ಬದುಕಲು ಅಭ್ಯಂತರವಿಲ್ಲ:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬದ ದಿನದಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಹುಟ್ಟುಹಬ್ಬದ ಕೊಡುಗೆ ನೀಡುವುದಾಗಿ ತಿಳಿಸಿರುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಭ್ರಮೆಯಲ್ಲಿ ಬದುಕುವವರಿಗೆ ನಾನು ಬೇಡ ಎನ್ನುವುದಿಲ್ಲ. ಅವರ ಕನಸುಗಳು ಅವರಿಗೇ ಇರಲಿ ಎಂದು ಹೇಳಿದರು.

ಅಗೋಚರ ಶಕ್ತಿಗಳ ಮೇಲೆ ನಂಬಿಕೆ ಇಲ್ಲ:
ಚುನಾವಣಾ ಪ್ರಚಾರದ ವೇಳೆ ಯಾರೋ ನಿಂಬೆಹಣ್ಣು ಕೊಟ್ಟಿದ್ದರು. ಅದನ್ನು ಹಿಡಿದುಕೊಂಡಿದ್ದೆ ಅಷ್ಟೆ. ನನಗೆ ಯಾವ ಅಗೋಚರ ಶಕ್ತಿಗಳ ಮೇಲೂ ನಂಬಿಕೆ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ