ಭ್ರಷ್ಟರನ್ನು ಇಟ್ಟುಕೊಂಡು ಅಧಿಕಾರ ಹಿಡಿಯಲು ಬಿಜೆಪಿ ಪ್ರಯತ್ನಿಸುತ್ತಿದೆ

ಕುಣಿಗಲ್, ಏ.5- ಭ್ರಷ್ಟರನ್ನು ಇಟ್ಟುಕೊಂಡು ಅಧಿಕಾರ ಹಿಡಿಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದರು.
ಇವರು ಪಟ್ಟಣದ ಗ್ರಾಮದೇವತೆ ವೃತ್ತದಲ್ಲಿ ಜನಾರ್ಶೀವಾದ ಕಾರ್ಯಕ್ರಮದಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ರಾಷ್ಟ್ರವನ್ನು ಆಳುತ್ತಿರುವ ಮೋದಿ ನೇತೃತ್ವದ ಸರ್ಕಾರ ಒಂದು ಸುಳ್ಳಿನ ಸರ್ಕಾರ. ಆದರೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ರೈತರ 50 ಸಾವಿರ ಸಾಲವನ್ನು ಸದ್ದಿಲ್ಲದೆ ಮನ್ನಾ ಮಾಡಿದರು. ಆದರೆ ನಂತರ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದಲೂ ಸುಳ್ಳುಗಳನ್ನೇ ಹೇಳುತ್ತಾ ಬಂದಿದೆ. ಅದೇ ರೀತಿ ರಾಜ್ಯದಲ್ಲೂ ಕೂಡ ಯಡಿಯೂರಪ್ಪನವರನ್ನು ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಂಡು ಪ್ರಚಾರ ನಡೆಸುತ್ತಿದ್ದಾರೆ ಎಂದರು.

ಅಮಿತ್ ಷಾ ಹೇಳುವಂತೆಯೇ ಯಡಿಯೂರಪ್ಪ ಭ್ರಷ್ಟರಾಗಿದ್ದು , ಅಂತಹ ಸರ್ಕಾರವನ್ನು ರಾಜ್ಯದ ಜನತೆ ಮತ್ತೆ ಅಧಿಕಾರಕ್ಕೆ ತರುವುದಿಲ್ಲ. ಜೆಡಿಎಸ್‍ಗೆ ಮತ ನೀಡಿದರೆ ಬಿಜೆಪಿಗೆ ಮತ ನೀಡಿದಂತೆ ಆಗುತ್ತದೆ. ಆದ್ದರಿಂದ ಎರಡು ಪಕ್ಷಗಳನ್ನು ಅಧಿಕಾರದಿಂದ ದೂರವಿಡಿ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸಿದೆ. ನುಡಿದಂತೆ ನಡೆದಿದೆ. ಆದ್ದರಿಂದ ಈ ಬಾರಿ ಮತದಾರರು ಕಾಂಗ್ರೆಸ್‍ಗೆ ಅಧಿಕಾರ ನೀಡುವ ಮುಖಾಂತರ ಅವಕಾಶ ನೀಡಲಿದ್ದಾರೆ.ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಬಿಜೆಪಿ ಒಂದು ಕೋಮುವಾದ ಪಕ್ಷವಾದರೆ ಜೆಡಿಎಸ್ ಅವಕಾಶವಾದಿ ಪಕ್ಷವಾಗಿದ್ದು,ಇಂಥವರಿಗೆ ಯಾವುದೇ ಕಾರಣಕ್ಕೂ ಮತ ನೀಡಬೇಡಿ. ಕಳೆದ ಬಾರಿ ಈ ಕಷೇತ್ರದಲ್ಲಿ ಕೆಲವು ರಾಜಕೀಯ ವ್ಯತ್ಯಾಸದಿಂದಾಗಿ ನಮ್ಮ ಅಭ್ಯರ್ಥಿ ಸೋಲು ಅನುಭವಿಸಬೇಕಾಯಿತು. ಆದರೆ ಈ ಬಾರಿ ಆಗಬಾರದು. ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂಬ ನಂಬಿಕೆ ಇದೆ. ಇದೇ ತಿಂಗಳ 12ರಂದು ಅಭ್ಯರ್ಥಿಗಳ ಆಯ್ಕೆ ಪಟ್ಟಿ ಅಂತಿಮವಾಗಲಿದ್ದು, ಬಿಡುಗಡೆಗೊಳ್ಳಲಿದೆ ಎಂದರು.
ರೋಡ್ ಶೋನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ.ಜಿ.ಪರಮೇಶ್ವರ್ , ಸಚಿವರಾದ ಟಿ.ಬಿ.ಜಯಚಂದ್ರ,ಡಿ.ಕೆ.ಶಿವಕುಮಾರ್, ಸಂಸದರಾದ ಮುದ್ದಹನುಮೇಗೌಡ, ಡಿ.ಕೆ.ಸುರೇಶ್, ಶಾಸಕ ಬಿ.ಬಿ.ರಾಮಸ್ವಾಮಿ ಗೌಡ, ಕೆಪಿಸಿಸಿ ಸದಸ್ಯ ಡಾ.ರಂಗನಾಥ್ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ