![RAMAYYA](http://kannada.vartamitra.com/wp-content/uploads/2018/04/RAMAYYA-678x337.jpg)
ಬೆಂಗಳೂರು,ಏ.5-ಹತ್ತನೇ ರಾಷ್ಟ್ರೀಯ ಮಕ್ಕಳ ತುರ್ತು ವೈದ್ಯಕೀಯ ಚಿಕಿತ್ಸಾ ಸಮ್ಮೇಳನವನ್ನು ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಇದೇ 7 ಮತ್ತು 8ರಂದು ಆಯೋಜಿಸಲಾಗಿದೆ ಎಂದು ಕಾರ್ಯಕಾರಿ ಅಧ್ಯಕ್ಷೆ ಡಾ.ಅರುಣಾ ಸಿ.ರಮೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಯ್ಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಬೆಂಗಳೂರು ಕರ್ನಾಟಕ ಮತ್ತು ಎಸ್ಇಎಂಐ ಮತ್ತು ದಿ ಸೊಸೈಟಿ ಫಾರ್ ಟ್ರಾಮಾ ಅಂಡ್ ಎಮರ್ಜೆನ್ಸಿ ಪೀಡಿಯಾಟ್ರಿಕ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಹಠಾತ್ ಅನಾರೋಗ್ಯ, ವೈದ್ಯಕೀಯ ತುರ್ತು ಪರಿಸ್ಥಿತಿ ಮತ್ತು ಗಾಯಗಳನ್ನು ಸಾಮಾನ್ಯವಾಗಿ ನಾವು ಮಕ್ಕಳು ಮತ್ತು ಶಿಶುಗಳಲ್ಲಿ ಕಾಣಬಹುದು. ಇಂತಹ ಗಂಭೀರ ಪರಿಸ್ಥಿತಿಯಲ್ಲಿರುವ ಅನಾರೋಗ್ಯಪೀಡಿತ ಮಗುವಿಗೆ ಸಮಗ್ರ ಹಾರೈಕೆ ನೀಡುವುದು ನಮ್ಮ ಜವಾಬ್ದಾರಿ ಎಂದರು.
ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಮಕ್ಕಳ ವೈದ್ಯಕೀಯ ಶಸ್ತ್ರ ಚಿಕಿತ್ಸೆ ಅಥವಾ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ಬೇಕಾದ ಮೂಲಭೂತ ಜ್ಞಾನ ಮತ್ತು ಪ್ರಯೋಗಿಕ ಜ್ಞಾನವನ್ನು ತಿಳಿಯಲು ಉತ್ತಮ ಅವಕಾಶ ಇದಾಗಿದೆ ಎಂದು ತಿಳಿಸಿದರು.
ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಸಮ್ಮೇಳನದಲ್ಲಿ ಭಾಗವಹಿಸುವ ವೈದ್ಯರು ಅಥವಾ ತಜ್ಞರ ಸಾಮಥ್ರ್ಯವನ್ನು ಹೆಚ್ಚಿಸುವುದು ನಮ್ಮ ಸಮ್ಮೇಳನದ ಉದ್ದೇಶವಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ತುರ್ತು ವೈದ್ಯಕೀಯ ಕ್ಷೇತ್ರದಲ್ಲಿ ನುರಿತರಾಗಿರುವ ತಜ್ಞರು ತಮ್ಮ ವಿಚಾರಧಾರೆ ಮತ್ತು ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತರು, ಕಿರಿಯ ವೈದ್ಯರು, ಶುಶ್ರೂಷಕರು , ತುರ್ತು ವೈದ್ಯಕೀಯ ತಜ್ಞರು , ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ತುರ್ತು ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.