ಬೆಂಗಳೂರು, ಏ.5- ಕನ್ನಡದ ಕಾವ್ಯ ಪ್ರಾಕಾರವನ್ನು ಓದುವ ಮೂಲಕವೇ ಈ ಭಾಷೆಯ ಚರಿತ್ರೆ ತಿಳಿಯಲು ಸಾಧ್ಯ ಎಂದು ಹಿರಿಯ ಸಾಹಿತಿ ಡಾ.ಕಮಲ ಹಂಪನಾ ತಿಳಿಸಿದರು.
ಸರ್ಕಾರಿ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಕನ್ನಡ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನಾಡಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಿಗರಾದ ನಾವು ಎಲ್ಲ ಭಾಷೆಗಳನ್ನೂ ಪ್ರೀತಿಸುತ್ತೇವೆ. ಬೇರೆ ರಾಜ್ಯದವರಿಗೆ ನಾವು ನೀಡುವ ಸಲುಗೆಯಿಂದ ನಮ್ಮ ಭಾಷೆ ಮಾತನಾಡುವುದಿಲ್ಲ. ಅವರು ಯಾವುದೇ ಭಾಷೆಯಲ್ಲಿ ಮಾತನಾಡಿದಾಗ ನಾವು ಕನ್ನಡದಲ್ಲೇ ಪ್ರತಿಕ್ರಿಯಿಸಬೇಕು. ಆಗ ನಾವು ಕನ್ನಡಕ್ಕೆ ಗೌರವ ನೀಡಿದಂತಾಗುತ್ತದೆ. ಕನ್ನಡದ ಬಗೆಗಿನ ಭಾಷಾಭಿಮಾನ ಅವರಿಗೆ ತಿಳಿಯುತ್ತದೆ ಎಂದರು.
ಕನ್ನಡದ ಹಬ್ಬಗಳ ಮೂಲಕ ಕನ್ನಡ ಕಂಪನ್ನು ಸಾರಬೇಕು. ನಾಡಗೀತೆ ಹಾಡುವಾಗ ಮೊದಲು ಮತ್ತು ಕಡೆಯ ನುಡಿಯನ್ನು ಹಾಡಿದರೆ ಸಾಕು. ನಮ್ಮ ಕನ್ನಡದ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ. ಕೊನೆಯ ಸಾಲುಗಳು ಎಲ್ಲ ಧರ್ಮಗಳನ್ನೂ ಒಳಗೊಂಡಿರುತ್ತವೆ ಎಂದರು.
ಅಕ್ಷರ ವಿದ್ಯೆಯಂತೆಯೇ ಅಕ್ಕರೆಯ ಗೇಯದ ಹಾಡು ಎಲ್ಲರೂ ಕಲಿಯಬೇಕು. ಕಾರ್ಯಕ್ರಮಗಳಲ್ಲಿ ಗೋಷ್ಠಿ, ಸಂವಾದಗಳು ನಡೆಯಬೇಕು. ನಮ್ಮ ಮುಂದಿನ ಪೀಳಿಗೆಗೆ ಇದು ಆವಶ್ಯಕ. ಇದರಿಂದ ಸಾಕಷ್ಟು ವಿಷಯಗಳನ್ನು ತಿಳಿಯಬಹುದು. ಶಿಕ್ಷಣ ಮುಖ್ಯವಾದದ್ದು. ಅದರ ಜತೆಗೆ ಕಲೆಯೂ ಇರಬೇಕು ಎಂದರು.
ವಿದ್ಯಾರ್ಥಿಗಳು ಕೆಲವು ಲಕ್ಷಣಗಳನ್ನು ಹೊಂದಿರಬೇಕು. ಬಕಪಕ್ಷಿಯಂತಹ ಏಕಾಗ್ರತೆಯ ದಾಹ ಇರಬೇಕು. ಶ್ವಾನ ನಿದ್ರೆಯಂತೆ ಜಾಗೃತಿ ಇರಬೇಕು. ನಿದ್ದೆ ತೆಳುವಾಗಿರಬೇಕು. ಆಹಾರ ನಿಯಮಿತವಾಗಿ ಸೇವನೆ ಮಾಡಬೇಕು ಮತ್ತು ಮನೆ ಬಿಟ್ಟು ಪ್ರಕೃತಿಯಲ್ಲಿ ಬದುಕಬೇಕು ಎಂದು ಹೇಳಿದರು.
ನಾಡೋಜ ಹಂಪ ನಾಗರಾಜಯ್ಯ ಮಾತನಾಡಿ, ವಿದ್ಯಾರ್ಥಿಗಳ ವಿಶ್ವಾಸವೇ ಉಪಾಧ್ಯಾಯರ ವಿಶ್ವಾಸವಾಗಿದೆ. ನಾನು ಕಾಲೇಜಿನಲ್ಲಿ ಆರು ವರ್ಷ ಉಪನ್ಯಾಸಕನಾಗಿ ಕೆಲಸ ಮಾಡಿದೆ. ಕರ್ನಾಟಕದಲ್ಲಿ ಕನ್ನಡವನ್ನು ಪ್ರೀತಿಸುವವರು ಅವರ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು. ಎಲ್ಲಿ ಪ್ರೀತಿ, ವಿಶ್ವಾಸ ಇರುತ್ತದೆಯೋ ಅಲ್ಲಿ ದ್ವೇಷ ಇರುವುದಿಲ್ಲ. ಕನ್ನಡವನ್ನು ಪ್ರೀತಿಸುವಾಗ ಅದರ ವೈಶಿಷ್ಟ್ಯತೆ ಸಿಗುತ್ತದೆ. ಮುಂದಿನ ಭವಿಷ್ಯದ ಹೊಣೆ ನಮ್ಮದಾಗಿದೆ ಎಂದರು.
ಇಂಗ್ಲಿಷ್ ಮತ್ತು ಸಂಸ್ಕøತ ಒಂದೇ ಸ್ವರೂಪದ ಭಾಷೆ. ವಿವೇಕ ಇಲ್ಲದೆ ಏನೂ ಪ್ರಯೋಜನವಿಲ್ಲ ಎಂದರು.
ಕಿರುತೆರೆ ನಟ ಕಿರಿಕ್ ಕೀರ್ತಿ ಕನ್ನಡ ಪತ್ರಿಕೆಗಳನ್ನು ಓದುವ ಮೂಲಕ ಕನ್ನಡ ಭಾಷೆಗೆ ಗೌರವ ನೀಡಬೇಕು. ಕನ್ನಡ ಭಾಷೆ ಮಾತ್ರವಲ್ಲ, ಅದು ಭಾವನಾತ್ಮಕವಾಗಿ ಕೂಡಿದೆ ಎಂದರು.
ಶೋಕಿಗೆ ಇಂಗ್ಲಿಷ್ನಲ್ಲಿ ಮಾತನಾಡುತ್ತಿರುವುದು ದೊಡ್ಡ ದುರಂತವೇ ಆಗಿದೆ ಎಂದರು.
ಪಂಪ, ಪೆÇನ್ನ, ರನ್ನ ಕನ್ನಡಕ್ಕಾಗಿ ಶ್ರಮಿಸಿದ್ದಾರೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನ ನಮ್ಮ ಮೇಲಿದೆ ಎಂದರು.