ಬೆಂಗಳೂರು, ಏ.5- ಕಾವೇರಿ ವಿವಾದದಲ್ಲಿ ಕೇಂದ್ರ ಸರ್ಕಾರ ತಮಿಳುನಾಡಿನ ಒತ್ತಡಕ್ಕೆ ಮಣಿಯದೆ ಸುಪ್ರೀಂಕೋರ್ಟ್ನ ಆದೇಶವನ್ನು ಯಥಾವತ್ತು ಪಾಲನೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಬಾಬುಜಗಜೀವನರಾಮ್ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಕಾವೇರಿ ವಿವಾದದಲ್ಲಿ ನ್ಯಾಯಾಲಯ ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸಲು ಸಮಿತಿಯೊಂದನ್ನು ರಚಿಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಅದನ್ನು ಕೇಂದ್ರ ಸರ್ಕಾರ ಪಾಲನೆ ಮಾಡಲಿ ಎಂದು ಆಗ್ರಹಿಸಿದರು.
ಈ ಹಿಂದೆ ನ್ಯಾಯಾಧೀಕರಣ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಸೂಚನೆ ನೀಡಿತ್ತು. ನ್ಯಾಯಾಧೀಕರಣದ ತೀರ್ಪಿನ ಕುರಿತು ಸಲ್ಲಿಸಲಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸ್ಕೀಮ್ ಮಾಡುವಂತೆ ಸೂಚನೆ ನೀಡಿದೆ.
ಸ್ಕೀಮ್ ಎಂದರೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಎಂದರ್ಥವಲ್ಲ. ನ್ಯಾಯಾಧೀಕರಣ ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸಲು ವ್ಯವಸ್ಥೆಯೊಂದನ್ನು ರೂಪಿಸಬೇಕು. ಅರ್ಥಾತ್ ಸಮಿತಿಯೊಂದನ್ನು ರಚಿಸಬೇಕು ಎಂದಾಗಿದೆ. ಕೇಂದ್ರ ಸರ್ಕಾರ ಅಷ್ಟನ್ನೇ ಮಾಡಬೇಕು. ತಮಿಳುನಾಡು ಸರ್ಕಾರ ಒತ್ತಡ ಹೇರುತ್ತಿದೆ. ಅದಕ್ಕೆ ಮಣಿಯಬಾರದು ಎಂದು ಹೇಳಿದರು.
ಪುದುಚೇರಿಯ ರಾಜ್ಯಪಾಲರಾದ ಕಿರಣ್ಬೇಡಿ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ನಾವು ಯಾರಿಗೂ ಅನ್ಯಾಯ ಮಾಡಿ ಎಂದು ಹೇಳುತ್ತಿಲ್ಲ. ನ್ಯಾಯಾಲಯದ ಆದೇಶವನ್ನು ಪಾಲಿಸಿ ಎಂದು ಹೇಳುತ್ತಿದ್ದೇವೆ. ತೀರ್ಪು ಪಾಲನೆ ಮಾಡಿದರೆ ಅನ್ಯಾಯ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.