ಬೆಂಗಳೂರು, ಏ.5- ಕೆಳಸ್ತರದಲ್ಲಿ ಜನಿಸಿ ದೇಶದ ಉಪ ಪ್ರಧಾನಿಯಾಗುವ ಮಟ್ಟಕ್ಕೆ ಬೆಳೆದ ಬಾಬುಜಗಜೀವನರಾಮ್ ಅವರ ಆದರ್ಶಗಳು ಅನುಕರಣೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಾಬುಜಿ ಅವರ 111ನೇ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಬಾಬು ಜಗಜೀವನರಾಮ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಬಾಬುಜಗಜೀವನ್ರಾಮ್ ಅವರು ಎಲ್ಲಾ ಇಲಾಖೆಗಳಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಸುದೀರ್ಘ ಕಾಲ ಸಚಿವರಾಗಿದ್ದ ಅವರು ರಕ್ಷಣೆ, ಗೃಹ ಸೇರಿದಂತೆ ಹಲವಾರು ಇಲಾಖೆಗಳ ಜವಾಬ್ದಾರಿ ನಿಭಾಯಿಸಿದ್ದರು. ಹಸಿರುಕ್ರಾಂತಿ ಯಶಸ್ವಿಯಾಗಿ ಆಹಾರ ಸ್ವಾವಲಂಬನೆಯಾಗಲು ಆಗಿನ ಪ್ರಧಾನಿ ಇಂದಿರಾಗಾಂಧಿ ಅವರಂತೆ ಬಾಬುಜಗಜೀವನರಾಮ್ ಅವರೂ ಕಾರಣ. ಅತ್ಯಂತ ಸರಳ ಹಾಗೂ ಪ್ರಾಮಾಣಿಕ ಜೀವನ ನಡೆಸಿದ ಅವರ ಆದರ್ಶಗಳು ಅನುಕರಣೀಯ. ಅವರ ಅನುಭವಗಳ ಮಾರ್ಗದರ್ಶನವನ್ನು ಪಾಲಿಸುವ ಅಗತ್ಯವಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿದ್ದರು.