ನವದೆಹಲಿ,ಏ.5- ಎರಡು ಬಾರಿ ಭೇಟಿಯಾದಾಗಲೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ತನ್ನನ್ನು ಬೈಯ್ದು ಹೊರಗೆ ಹಾಕಿದ್ದಾರೆ ಎಂದು ದೂರಿ ಬಿಜೆಪಿಯ ದಲಿತ ಸಂಸದ ಛೋಟೆ ಲಾಲ್ ಖರ್ವರ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ತಮ್ಮ ಕ್ಷೇತ್ರದ ಸ್ಥಳೀಯಾಡಳಿತ ಕೂಡ ತನ್ನ ವಿರುದ್ಧ ತಾರತಮ್ಯಕಾರಿ ನಿಲುವು ತಳೆದಿದೆ, ಪಕ್ಷ ಕೂಡ ತನ್ನ ದೂರುಗಳನ್ನು ಪರಿಗಣಿಸುತ್ತಿಲ್ಲ ಎಂದು ಛೋಟೆಲಾಲ್ ಪತ್ರದಲ್ಲಿ ದೂರಿದ್ದಾರೆ ಎನ್ನಲಾಗಿದೆ. ಪತ್ರದಲ್ಲಿ ಸಿಎಂ ಆದಿತ್ಯನಾಥ್ ಹೊರತಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಮಹೇಂದ್ರನಾಥ್ ಪಾಂಡೆ ಹಾಗೂ ಇನ್ನೊಬ್ಬ ನಾಯಕ ಸುನಿಲ್ ಬನ್ಸಾಲ್ ಅವರ ಹೆಸರನ್ನೂ ನಮೂದಿಸಿದ್ದು, ದೂರಿನ ಪ್ರತಿಯನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಆಯೋಗಕ್ಕೂ ಕಳುಹಿಸಿದ್ದಾರೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ
ದೌರ್ಜನ್ಯ ತಡೆ ವಿರೋಧಿ ಕಾಯ್ದೆ ನಿಯಮಾವಳಿಗಳನ್ನು ಸುಪ್ರೀಂ ಕೋರ್ಟ್ ಸಡಿಲಗೊಳಿಸಿರುವುದರ ವಿರುದ್ಧ ದೇಶಾದ್ಯಂತ ನಡೆದ ದಲಿತರ ಪ್ರತಿಭಟನೆಗಳಲ್ಲಿ 11 ಮಂದಿ ಸಾವಿಗೀಡಾದ ನಂತರದ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.