ಹಾಸನ,ಏ.5- ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕಚೇರಿಯಲ್ಲಿ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಪಶು ಸಂಗೋಪನಾ ಸಚಿವ ಎ.ಮಂಜು ವಿರುದ್ಧ ಚುನಾವಣಾ ಆಯೋಗ ಎಫ್ಐಆರ್ ದಾಖಲಿಸಿದೆ.
ಇತ್ತೀಚೆಗೆ ಮಂಜು ಅವರ ಕಚೇರಿಯ ಬಾಗಿಲಿಗೆ ಬೀಗ ಹಾಕಿ ಒಳಗೆ ಸಿಬ್ಬಂದಿಗಳು ಕೆಲಸ ಮಾಡುತ್ತಿರುವ ಬಗ್ಗೆ ಮಾಧ್ಯಮಗಳು ಬಿತ್ತರಿಸಿದ್ದವು. ಮತ್ತು ಇವು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿ ಭಾರೀ ಚರ್ಚೆಗೂ ಗ್ರಾಸವಾಗಿತ್ತು.
ಇದರ ನಡುವೆ ಜಿಲ್ಲಾ ಚುನಾವಣಾ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಸಚಿವರಿಗೆ ನೋಟಿಸ್ ನೀಡಿ ಸಮಜಾಯಿಷಿ ನೀಡುವಂತೆ ತಿಳಿಸಿ ಏ.2ರವರೆಗೂ ಕಾಲಾವಕಾಶ ನೀಡಿದ್ದರು.
ಅದರಂತೆ ಸಚಿವರು ಕೂಡ ಪತ್ರ ಬರೆದು ನಾವು ಇನ್ನು ಸಚಿವರು. ಸರ್ಕಾರದ ಅಧಿಕಾರದ ಅವಧಿ ಮೇ ಅಂತ್ಯದವರೆಗೆ ಇದೆ. ಯಾವುದೇ ಸಂವಿಧಾನ ಬಾಹಿರ ಕೆಲಸವನ್ನು ಮಾಡಿಲ್ಲ. ನೀತಿ ಸಂಹಿತೆಯನ್ನು ಕೂಡ ಉಲ್ಲಂಘಿಸಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ಆದರೆ ಕಚೇರಿಗೆ ಬೀಗ ಮತ್ತು ಅದರ ಕೀ ಯಾರ ಬಳಿ ಇತ್ತು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಸಚಿವರ ಆಪ್ತರ ಬಳಿ ಇತ್ತೆಂದು ಗೊತ್ತಾಗಿ ಈಗ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಮಂಜು ವಿರುದ್ದ ಎಫ್ಐಆರ್ ದಾಖಲಾಗಿದೆ.
ಸಚಿವರ ಮೇಲೆ ಎಫ್ಐಆರ್ ದಾಖಲಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.