ನಗರದಲ್ಲಿ ಮತದಾನ ಹೆಚ್ಚಳಕ್ಕೆ ಚುನಾವಣಾ ಆಯೋಗ ಕಸರತ್ತು

ಬೆಂಗಳೂರು, ಏ.4- ನಗರದಲ್ಲಿ ಶೇಕಡಾವಾರು ಮತದಾನ ಕುಂಠಿತಗೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಮತದಾನ ಹೆಚ್ಚಳಕ್ಕೆ ಕಸರತ್ತು ಆರಂಭಿಸಿದೆ.

ಮತದಾನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ನಗರದ ಎಂಟು ವಲಯಗಳಲ್ಲಿ ಎಂಟು ಜಾಹೀರಾತು ವಾಹನಗಳನ್ನು ಸಿದ್ದಪಡಿಸಿದೆ.
ನಗರಕ್ಕೆ ಆಗಮಿಸುತ್ತಿರುವ ಕೇಂದ್ರ ಚುನಾವಣಾ ಆಯುಕ್ತ ಓಂಪ್ರಕಾಶ್ ರಾವತ್ ಅವರು ಈ ಎಂಟು ವಾಹನಗಳಿಗೆ ನಾಳೆ ಚಿತ್ರಕಲಾಪರಿಷತ್‍ನಲ್ಲಿ ಹಸಿರು ನಿಶಾನೆ ತೋರಲಿದ್ದಾರೆ.

ಈ ಜಾಹೀರಾತು ವಾಹನಗಳ ಮೇಲೆ ಮತದಾನ ಏಕೆ ಮಾಡಬೇಕು, ಮತದಾನದ ಮಹತ್ವ ಏನು, 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂಬ ಬರಹಗಳನ್ನು ಅವಳಡಿಸಲಾಗಿದೆ. ಇವು ಆಯಾ ವಲಯಗಳ ಎಲ್ಲ ರಸ್ತೆ, ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸಿ ಜನರಿಗೆ ಮತದಾನದಲ್ಲಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಲಿವೆ.
ಚಿತ್ರಕಲಾ ಪರಿಷತ್ತಿನಲ್ಲೇ ಮತದಾನದ ಮಹತ್ವ, ಪಾಲ್ಗೊಳ್ಳುವ ಬಗ್ಗೆ ಛಾಯಾಚಿತ್ರಗಳ ವಸ್ತು ಪ್ರದರ್ಶನ ಕೂಡ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿರುವ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯುಕ್ತರು ಮತದಾರರಿಗೆ ಇವಿಎಂ ಹಾಗೂ ಇದೇ ಮೊದಲ ಬಾರಿಗೆ ಅಳವಡಿಸಲಾಗಿರುವ ವಿವಿಪ್ಯಾಟ್ ಬಗ್ಗೆ ಅರಿವು ಮೂಡಿಸುವರು.

 

ವಿವಿಪ್ಯಾಟ್‍ನಲ್ಲಿ ಮತ ಚಲಾಯಿಸಿದ ನಂತರ ಕೇವಲ ಏಳು ಸೆಕೆಂಡ್‍ನಲ್ಲಿ ಮತದಾರ ಯಾವ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದಾನೆ ಎಂಬುದು ಚಿನ್ಹೆ ಸಹಿತ ಗೊತ್ತಾಗಲಿದೆ. ಇದನ್ನು ಪರಿಶೀಲಿಸಿಕೊಳ್ಳಬಹುದು.
ಒಂದು ವೇಳೆ ವಿವಿ ಪ್ಯಾಟ್‍ನಲ್ಲಿ ಲೋಪದೋಷ ಕಂಡುಬಂದರೆ ತಕ್ಷಣ ಅಲ್ಲೇ ದೂರು ನೀಡಬಹುದು. ತಪ್ಪು ದೂರು ನೀಡಿದ್ದೇ ಆದರೆ ಅಂತಹ ಮತದಾರರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.

ಹಾಗಾಗಿ ಮತದಾರರು ಸರಿಯಾಗಿ ಮತಚಲಾಯಿಸಿ ಪರಿಶೀಲಿಸಿ. ಆದರೆ, ತಪ್ಪು ದೂರು ನೀಡಬೇಡಿ. ಪಾರದರ್ಶಕ ಚುನಾವಣೆ ನಡೆಯಲಿದೆ. ವಿವಿಪ್ಯಾಟ್ ಹಾಗೂ ಇವಿಎಂಗಳ ಬಗ್ಗೆ ಅಪನಂಬಿಕೆ ಬೇಡ ಎಂಬ ಬಗ್ಗೆ ಮೂವರು ಚುನಾವಣಾ ಆಯುಕ್ತರು ಅರಿವು ಮೂಡಿಸುವರು.
ಜತೆಗೆ ಜಿಲ್ಲಾಧಿಕಾರಿ ದಯಾನಂದ್, ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಮತ್ತಿತರ ಅಧಿಕಾರಿಗಳು ಹಾಜರಿದ್ದು, ಚುನಾವಣೆ ಮತದಾನದ ಬಗ್ಗೆ ಜಾಗೃತಿ ಮೂಡಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ