ಏ.8 ಮತ್ತು 9ರಂದು ಬೆಂಗಳೂರಿನಲ್ಲಿ ಬಿಜೆಪಿಯ ಚಾಣಾಕ್ಯನ ವಾಸ್ತವ್ಯ

ಬೆಂಗಳೂರು,ಏ.4- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇದೇ 8 ಮತ್ತು 9ರಂದು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಭಾನುವಾರ ಕಾಂಗ್ರೆಸ್‍ನ ಜನಾರ್ಶೀವಾದ ಯಾತ್ರೆಯ ಸಮಾರೋಪ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದೆ. ಇತ್ತ ಬಿಜೆಪಿಯ ಚಾಣಾಕ್ಯ ಎಂದೇ ಕರೆಯಲ್ಪಡುವ ಅಮಿತ್ ಷಾ ಎರಡು ದಿನಗಳ ಕಾಲ ನಗರದಲ್ಲಿ ಠಿಕಾಣಿ ಹೂಡುತ್ತಿರುವುದರಿಂದ ಬಿಜೆಪಿ ವಲಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ.

ಮೂಲಗಳ ಪ್ರಕಾರ ಅಮಿತ್ ಷಾ ಎರಡು ದಿನಗಳಲ್ಲಿ ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು, ಜಿಲ್ಲಾ ಅಧ್ಯಕ್ಷರು, ಮಂಡಲ ಪ್ರಮುಖರು ಹಾಗೂ ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಲಿದ್ದಾರೆ.
ಏ.10ರ ನಂತರ ಯಾವುದೇ ಸಂದರ್ಭದಲ್ಲೂ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಅಮಿತ್ ಷಾ ಪಕ್ಷದ ಪ್ರಮುಖರೊಂದಿಗೆ ಚರ್ಚೆ ನಡೆಸಿ ಅಭ್ಯರ್ಥಿಗಳ ಪಟ್ಟಿ ಗೆ ಅಂತಿಮ ಸ್ಪರ್ಶ ನೀಡಲಿದ್ದಾರೆ.

ಪಕ್ಷದ ಮೂಲಗಳ ಪ್ರಕಾರ ಮೊದಲ ಹಂತದಲ್ಲಿ 130ರಿಂದ 140 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಲಿದೆ. ಇದರಲ್ಲಿ ಹಾಲಿ ಶಾಸಕರು, ಬೇರೆ ಬೇರೆ ಪಕ್ಷಗಳಿಂದ ಬಂದಿರುವ ವಲಸಿಗರಿಗೆ ಹಾಗೂ 2013ರ ವಿಧಾನಸಭಾ ಚುನಾವಣೆಯಲ್ಲಿ 5 ಸಾವಿರದೊಳಗೆ ಪರಾಭವಗೊಂಡ ಅಭ್ಯರ್ಥಿಗಳಿಗೂ ಟಿಕೆಟ್ ಘೋಷಣೆಯಾಗಲಿದೆ.
ಮೂರಕ್ಕೂ ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರಗಳ ಪಟ್ಟಿಯನ್ನು ಕೊನೆ ಕ್ಷಣದವರೆಗೂ ಬಿಡುಗಡೆ ಮಾಡದೆ ನಾಮಪತ್ರ ಸಲ್ಲಿಕೆಗೆ ಎರಡು ದಿನ ಇರುವಾಗ ಘೋಷಿಸಲು ಪಕ್ಷದ ಪ್ರಮುಖರು ತೀರ್ಮಾನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ