ಜಿಎಸ್‍ಟಿ ಜಾರಿಯಿಂದ ಜನ ಸಾಮಾನ್ಯರಿಗೆ ಆಗಿರುವ ತೊಂದರೆ ಸರಿಪಡಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲ : ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ

ತುಮಕೂರು, ಏ.4- ಜಿಎಸ್‍ಟಿ ಜಾರಿಯಿಂದ ಜನ ಸಾಮಾನ್ಯರಿಗೆ ಆಗಿರುವ ತೊಂದರೆ ಸರಿಪಡಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರು, ಜನ ಸಾಮಾನ್ಯರ ಬಗ್ಗೆ ಯಾವುದೇ ಕಾಳಜಿ ಹೊಂದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಚಿತ್ರದುರ್ಗ ಹಿಲ್ಲೆಯ ಹೊಳಲ್ಕೆರೆಯಿಂದ ತುಮಕೂರಿನ ಸಿದ್ದಗಂಗಾಮಠಕ್ಕೆ ಆಗಮಿಸಿದ ರಾಹುಲ್‍ಗಾಂಧಿ, ಮಠಕ್ಕೆ ತೆರಳಿ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರ 111ನೇ ವರ್ಷದ ಜನ್ಮ ದಿನೋತ್ಸವದ ಶುಭಾಶಯ ಕೋರಿ ಗುರುವಂದನೆ ಸಲ್ಲಿಸಿದರು.

ಶಿವಕುಮಾರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದು ಸುಮಾರು 25 ನಿಮಿಷಕ್ಕೂ ಹೆಚ್ಚು ಕಾಲ ಶ್ರೀಗಳ ಜತೆ ಮಾತುಕತೆ ನಡೆಸಿದರು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಶಾಸಕರಾದ ಕೆ.ಎನ್.ರಾಜಣ್ಣ, ಡಾ.ರಫೀಕ್ ಅಹಮ್ಮದ್, ಷಡಕ್ಷರಿ, ವೆಂಕಟರಮಣಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್‍ಗಾಂಧಿ, ರಾಷ್ಟ್ರಾದ್ಯಂತ ಜಿಎಸ್‍ಟಿಯಿಂದ ಜನಸಮಾನ್ಯರಗೆ, ವ್ಯಾಪರಸ್ಥರಿಗೆ, ರೈತರಿಗೆ ಭಾರೀ ಹೊಡೆತ ಬಿದ್ದಿದ್ದು, ಆದರೆ, ಇದನ್ನು ಸರಿಪಡಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.

ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಿರುದ್ಯೋಗ ಸಮಸ್ಯೆ, ರೈತರ ಸಾಲಮನ್ನಾ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ಇವರಿಗೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಹರಿಹಾಯ್ದರು.

ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಹಾಗೂ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ. ಜೈಲಿಗೆ ಹೋಗಿ ಬಂದವರ ಜತೆಯಲ್ಲೇ ಅಮಿತ್ ಶಾ ಓಡಾಡುತ್ತಾರೆ. ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ವೈಯಕ್ತಿಕ ವಿಚಾರವಾಗಿ ಗಲಾಟೆಯಾಗಿ ಕೊಲೆಯಾದರೆ ಅದನ್ನು ಕೋಮು ಭಾವನೆಗೆ ಬಿಜೆಪಿಯವರು ತಿರುಚುತ್ತಾರೆ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವುದೇ ಇವರ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧ. ಅದನ್ನು ತಡೆಯಲು ಬಿಜೆಪಿ, ಜೆಡಿಎಸ್‍ಗೆ ಸಾಧ್ಯವಿಲ್ಲ ಎಂದರು.
224 ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ಬಗ್ಗೆ ಯಾವುದೇ ಗೊಂದಲವಿಲ್ಲ. ಮುಂದಿನ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಾಗುವುದು. ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ರಾಹುಲ್ ತಿಳಿಸಿದರು.

ನಂತರ ತೆರೆದ ಬಸ್‍ನಲ್ಲಿ ಮಠದಿಂದ ಕ್ಯಾತ್ಸಂದ್ರದವರೆಗೆ ರೋಡ್ ಶೋ ನಡೆಸಲಾಯಿತು. ಈ ವೇಳೆ ರಾಜ್ಯ ಯುವ ಕಾಂಗ್ರೆಸ್‍ನ ಉಪಾಧ್ಯಕ್ಷ ಆರ್.ರಾಜೇಂದ್ರ ನೇತೃತ್ವದಲ್ಲಿ ನೂರಾರು ಯುವಕರು ರಾಹುಲ್ ಅವರನ್ನು ಸನ್ಮಾನಿಸಿದರು.

ಲಕ್ಕಪ್ಪ ಸರ್ಕಲ್‍ನಿಂದ ಕುಣಿಗಲ್‍ಗೆ ತೆರಳಿ ಅಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ