ಬೆಂಗಳೂರು, ಏ.3- ದೇಶದ ಮುಂದೆ ದೊಡ್ಡ ಸವಾಲುಗಳಿವೆ. ಪ್ರಜಾಪ್ರಭುತ್ವ, ವೈವಿಧ್ಯತೆ, ಅಭಿವೃದ್ಧಿ ಸೇರಿ ಈ ಮೂರು ಕ್ಷೇತ್ರಗಳಿಗೆ ಅಪಾಯ ಎದುರಾಗಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಪೆÇ್ರ.ಯೋಗೇಂದ್ರ ಯಾದವ್ ತಿಳಿಸಿದರು.
ಸ್ವರಾಜ್ ಇಂಡಿಯಾ ಸಕ್ರಿಯ ಕಾರ್ಯಕರ್ತರ ಸಮಾವೇಶ, ರಾಜ್ಯ ಘಟಕದ ಪದಾಧಿಕಾರಿಗಳ ಆಯ್ಕೆ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿಗಳ ಮೊದಲ ಹಂತ ಪಟ್ಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಹಾಗೂ ವೈವಿಧ್ಯತೆಯನ್ನು ನಿರ್ಲಕ್ಷಿಸಲಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಕೊನೆಯ ವ್ಯಕ್ತಿಯ ಕಣ್ಣೊರೆಸುವ ಆಶಯ ಕಾಣುತ್ತಿಲ್ಲ. ಪ್ರಮುಖ ಪಕ್ಷಗಳು ಈ ವಿಷಯದಲ್ಲಿ ತಟಸ್ಥವಾಗಿವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಕೂಡ ರಾಷ್ಟ್ರೀಯತೆ ಪ್ರತಿಪಾದಿಸುವಲ್ಲಿ ವಿಫಲವಾಗಿದೆ. ವೈಚಾರಿಕ ರಾಜನೀತಿ ಶೂನ್ಯವಾಗಿದೆ ಎಂದು ಹೇಳಿದರು.
ಕರ್ನಾಟಕ ವಿಚಾರಗಳ ತವರೂರು. ಹಲವು ವೈಚಾರಿಕ ಚಳವಳಿಗಳು ಇಲ್ಲಿ ಹುಟ್ಟಿವೆ. ದಲಿತ ರೈತ ಚಳವಳಿಗಳು ಇಲ್ಲಿ ಹುಟ್ಟಿ ದೇಶದಲ್ಲಿ ಪ್ರಕಾಶಮಾನಕ್ಕೆ ಬಂದಿವೆ. ರಾಜನೀತಿಯ ಪ್ರೇರಣಾ ಭೂಮಿ ಇದು, ಇಲ್ಲೇ ಹಲವು ಪ್ರಯೋಗಗಳು ನಡೆದಿವೆ. ದಿ.ಪೆÇ್ರ.ನಂಜುಂಡಸ್ವಾಮಿ ಅವರು ರೈತ ಚಳವಳಿಯನ್ನು ಇಲ್ಲಿಂದಲೇ ತಲುಪಿಸಿದರು ಎಂದು ತಿಳಿಸಿದರು.
ಸರ್ವೋದಯ ಕರ್ನಾಟಕ ಪಕ್ಷವನ್ನು ಇಲ್ಲಿಂದಲೇ ಆರಂಭಿಸಲಾಯಿತು. ಅದು ಈಗ ನಮ್ಮ ಸ್ವರಾಜ್ ಇಂಡಿಯಾ ಜತೆ ವಿಲೀನವಾಗಿದೆ. ವಿಚಾರವಿಲ್ಲದ ರಾಜಕೀಯ ದಂಧೆಯಾಗುತ್ತದೆ. ವ್ಯವಹಾರವಾಗಿ ಬದಲಾಗುತ್ತದೆ. ಸರ್ಕಾರಿ ಹುದ್ದೆಗಳು ಮಾರಾಟವಾಗುತ್ತವೆ. ಜಮೀನುಗಳು ಅಕ್ರಮವಾಗಿ ಬೇರೆಯವರ ಪಾಲಾಗುತ್ತವೆ. ಸ್ವರಾಜ್ ಇಂಡಿಯಾ ಇಂತಹ ವಾತಾವರಣವನ್ನು ಬದಲಾವಣೆ ಮಾಡುವ ಸಂಕಲ್ಪ ತೊಟ್ಟಿದೆ.
ರಾಜಕೀಯದಲ್ಲಿ ಮರ್ಯಾದೆಯನ್ನು ಮರು ಸ್ಥಾಪನೆ ಮಾಡುವುದೇ ನಮ್ಮ ಮೂಲ ಉದ್ದೇಶ. ಹಾಗಾಗಿ ರಾಜಕಾರಣವನ್ನು ಮರು ಪ್ರಾರಂಭಿಸಬೇಕಿದೆ ಎಂದು ಪೆÇ್ರ.ಯೋಗೇಂದ್ರ ಯಾದವ್ ತಿಳಿಸಿದರು.
ದಲಿತ ಚಳವಳಿಗಳು ಎಲ್ಲೆಡೆ ನಡೆಯುತ್ತಿವೆ. ಆದರೆ ಹಿಂಸಾಚಾರವೂ ಆಗುತ್ತಿದೆ. ಹಾಗಾಗಬಾರದು, ವೈಚಾರಿಕತೆ ನೆಲೆಗಟ್ಟಿನಲ್ಲಿ ಚಳವಳಿಗಳು ನಡೆಯಬೇಕು. ಟಿಕೆಟ್ ಹಂಚಿಕೆ ದೆಹಲಿಯಲ್ಲಿ ಕುಳಿತು ನಿರ್ಧಾರವಾಗಬಾರದು. ಇಲ್ಲಿಂದಲೇ ನಿರ್ಧಾರವಾಗಬೇಕು ಎಂದು ತಿಳಿಸಿದರು.
ವಿಚಾರವಾದಿ ದೇವನೂರು ಮಹದೇವ್ ಮಾತನಾಡಿ, ಅಭಿವೃದ್ಧಿ ಎಂಬ ಅರ್ಥ ಉದ್ಯೋಗ ಮತ್ತು ಸ್ವಾವಲಂಬನೆಯಾಗಿರಬೇಕು. ಸಂಪತ್ತು ಗಳಿಕೆ ಹಾಗೂ ಸಮಾನತೆ ಜೊತೆ ಜೊತೆಯಾಗಿ ನಡೆಯಬೇಕು ಎಂದು ಹೇಳಿದರು.
ಚುನಾವಣೆ ಎಂದರೆ ಹಣ ಚೆಲ್ಲುವುದು, ಅಧಿಕಾರ ಸಂಪಾದನೆ ಮಾಡುವುದು, ಅಧಿಕಾರವನ್ನು ಮೇವಾಗಿ ಪರಿವರ್ತಿಸಿಕೊಳ್ಳುವುದಲ್ಲ ಎಂದು ಹೇಳಿದರು.
ಭ್ರಷ್ಟಾಚಾರ ವ್ಯವಸ್ಥೆ ವಿರುದ್ಧ ಹೋರಾಡಬೇಕು. ರಾಜಕಾರಣಿಗಳು ಹಣದ ಹಿಂದೆ ಬಿದ್ದು ಹಾಳಾಗಿದ್ದಾರೆ. ಇದನ್ನು ಸರಿಪಡಿಸಬೇಕಿದೆ. ಭ್ರಷ್ಟಾಚಾರ ವಿರುದ್ಧ ಹೋರಾಡಬೇಕಿದೆ. ಐಷಾರಾಮಿ ಜೀವನದಿಂದಾಗಿ ಹವಾಮಾನ ವೈಪರೀತ್ಯವಾಗುತ್ತಿದೆ. ಇಂಗಾಲದ ಡೈ ಆಕ್ಸೈಡ್ ಹೆಚ್ಚಾಗಿ ತಾಪಮಾನ ಏರುತ್ತಿದೆ. ಮಳೆ ಬಂದರೂ ಅದು ಸಮತೋಲನವಾಗಿಲ್ಲ. ಬಿಸಿ ಏರುತ್ತಲೇ ಇದೆ. ಇಂತಹ ಸವಾಲುಗಳನ್ನು ಬಗೆಹರಿಸಲು ವಿವೇಚನೆ ಬಳಸದೆ ಇದ್ದರೆ ಅದು ಅಭಿವೃದ್ಧಿ ರಾಜಕಾರಣವಾಗುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್, ಚುಕ್ಕಿ ನಂಜುಂಡಸ್ವಾಮಿ, ಬಡಗೂರುಪುರ ನಾಗೇಂದ್ರ, ಸ್ವರಾಜ್ ಇಂಡಿಯಾದ ಅಮ್ಜದ್ ಪಾಷ, ಯತಿರಾಜ್, ದಲಿತ ಮುಖಂಡರಾದ ಗುರುಪ್ರಸಾದ್ ಕೆರಗೂರು, ವಿ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.