ಬೆಂಗಳೂರು, ಏ.3-ಜೆಡಿಯುನ ರಾಷ್ಟ್ರೀಯ ಅಧ್ಯಕ್ಷ ನಿತೀಶ್ಕುಮಾರ್ ಅವರು ಏ.11 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜೆಡಿಯು ವಿಭಜನೆಯಾದ ನಂತರ ನಿತೀಶ್ಕುಮಾರ್ ಬಣ ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದಿದ್ದು, 224 ಕ್ಷೇತ್ರಗಳಲ್ಲೂ ನಾವು ಸ್ಪರ್ಧಿಸಲ್ಲ. ಬದಲಾಗಿ ನಮಗೆ ಸಾಮಥ್ರ್ಯವಿರುವ 25 ರಿಂದ 30 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದರು.
ಏ.15ರೊಳಗೆ ಜೆಡಿಯು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ನಮ್ಮ ಪಕ್ಷವು ಹೊಸ ಆಲೋಚನೆ, ಭ್ರಷ್ಟಾಚಾರ ಮುಕ್ತ ಹಾಗೂ ಶುದ್ದ ರಾಜಕಾರಣಕ್ಕೆ ಒತ್ತು ನೀಡುತ್ತದೆ. ನಿತೀಶ್ಕುಮಾರ್ ಅವರು ಶುದ್ಧ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದಾರೆ. ರಾಜ್ಯದಲ್ಲಿ ನಾನೂ ಕೂಡ ಶುದ್ಧ ರಾಜಕಾರಣಿಯಾಗಿ ಗುರುತಿಸಿಕೊಂಡು ಜೆಡಿಯು ರಾಜ್ಯಾಧ್ಯಕ್ಷನಾಗಿದ್ದೇನೆ ಎಂದರು.
ಕರ್ನಾಟಕದಲ್ಲಿ ಜೆಡಿಯು ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಬಿಜೆಪಿ ಸೇರಿದಂತೆ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಬಿಜೆಪಿ ನಮ್ಮನ್ನು ಪ್ರಬಲ ಅಭ್ಯರ್ಥಿ ಎಂದುಪರಿಗಣಿಸಿಲ್ಲ. ಹಾಗಾಗಿ ಅವರೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜನರು ಒಳ್ಳೆಯ ಆಲೋಚನೆಗಳಿಗೆ ಬೆಂಬಲ ನೀಡಬೇಕೆಂದರು.
ಸಂಯುಕ್ತ ಜನತಾದಳ ಪಕ್ಷ ನಿತೀಶ್ಕುಮಾರ್ ಅವರಿಗೆ ಸೇರಿದ್ದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಹಳೆಯ ಚಿಹ್ನೆಯನ್ನು ನಾವು ಮಾತ್ರ ಬಳಸಲು ಅವಕಾಶ ನೀಡಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಡಿದಾಳು ಶಾಮಣ್ಣ, ನಟ ಉಪೇಂದ್ರ, ಲಕ್ಷ್ಮಿನಾರಾಯಣಗೌಡ ನಮ್ಮನ್ನು ಸಂಪರ್ಕಿಸಿ ಬೆಂಬಲ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ. ಕರ್ನಾಟಕ ಸೇವಾ ದಳ ಕೂಡ ನಮಗೆ ಬೆಂಬಲ ಸೂಚಿಸಲಿದೆ ಎಂದರು.
ಜೆಡಿಯು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಒಂದು ವರ್ಷಕ್ಕೆ 50 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು. ಜೆಡಿಯು ಶಾಸಕರು ಆಯ್ಕೆಯಾದರೆ ಆಯ್ಕೆಯಾದ ಕ್ಷೇತ್ರದಲ್ಲಿ 4 ರಿಂದ 5 ಸಾವಿರ ಉದ್ಯೋಗ ಸೃಷ್ಟಿಸುವುದಾಗಿ ಬಾಂಡ್ ಪೇಪರ್ನಲ್ಲಿ ಬರೆದುಕೊಡುವುದಾಗಿ ಹೇಳಿದರು.
ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ ಎಂದು ಮಹಿಮಾ ಪಟೇಲ್ ಹೇಳಿದರು.