![supremecourt-delhi](http://kannada.vartamitra.com/wp-content/uploads/2018/02/supremecourt-delhi-650x381.jpg)
ನವದೆಹಲಿ, ಏ.3-ಕಾವೇರಿ ನದಿ ನಿರ್ವಹಣಾ ಮಂಡಳಿ ರಚನೆ ಕುರಿತು ಫೆ.19ರಂದು ನೀಡಿರುವ ತೀರ್ಪಿನ ಬಗ್ಗೆ ಸ್ಪಷ್ಟೀಕರಣ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ಅಂಗೀಕರಿಸಿದ್ದು, ಏ.9ರಂದು ವಿಚಾರಣೆ ನಡೆಸಲಿದೆ.
ಕಾವೇರಿ ನಿರ್ವಹಣಾ ಮಂಡಲಿ ರಚನೆ ಮತ್ತು ಯೋಜನೆ ಅನುಷ್ಠಾನ ವಿಷಯಕ್ಕೆ ಸಂಬಂಧಪಟ್ಟಂತೆ ನಾಲ್ಕೂ ರಾಜ್ಯಗಳಲ್ಲಿ ವಿಭಿನ್ನ ನಿಲುವು ಮತ್ತು ಅಭಿಪ್ರಾಯಗಳಿವೆ. ಹೀಗಾಗಿ ಈ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿದೆ ಎಂದು ಕೋರಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಮನವಿ ಸಲ್ಲಿಸಿತ್ತು.
ಈ ಅರ್ಜಿಯನ್ನು ಅಂಗೀಕರಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ಪೀಠ, ಏ.9ರಂದು ವಿಚಾರಣೆಗೆ ದಿನಾಂಕ ನಿಗದಿಗೊಳಿಸಿತು.
ಈ ಪ್ರಕರಣದ ತ್ವರಿತ ವಿಚಾರಣೆ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಪರ ವಕೀಲ ವಾಸೀಂ ಖಾದ್ರಿ ಮನವಿ ಮಾಡಿದಾಗ, ತಮಿಳುನಾಡು ಸಲ್ಲಿಸಿರುವ ಅರ್ಜಿಯೊಂದಿಗೆ ಈ ಮನವಿಯನ್ನೂ ಏ.9ರಂದು ವಿಚಾರಣೆ ನಡೆಸುವುದಾಗಿ ಪೀಠವು ತಿಳಿಸಿತು.
ಕಾವೇರಿ ನಿರ್ವಹಣಾ ಮಂಡಳಿ ರಚಿಸಿಲ್ಲ ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ಕೂಡ ಅದೇ ದಿನ ಸುಪ್ರೀಂಕೋರ್ಟ್ ಮುಂದೆ ಬರಲಿದೆ.
ಈ ಎರಡೂ ಅರ್ಜಿಗಳ ಕುರಿತು ಏ.9ರಂದೇ ವಿಚಾರಣೆ ನಡೆಯುವುದರಿಂದ ಮುಂದಿನ ಬೆಳವಣಿಗೆ ಕುತೂಹಲ ಸೃಷ್ಟಿಸಿದೆ.
ಕಾವೇರಿ ನಿರ್ವಹಣಾ ಮಂಡಲಿ ರಚನೆ ಮತ್ತು ಯೋಜನೆ ಅನುಷ್ಠಾನ ವಿಷಯಕ್ಕೆ ಸಂಬಂಧಪಟ್ಟಂತೆ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳಲ್ಲಿ ಬೇರೆ ಬೇರೆ ಅಭಿಪ್ರಾಯಗಳಿವೆ. ಈ ಕುರಿತು ಒಮ್ಮತ ಮೂಡಿಸಲು ಈ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿದೆ ಎಂದು ಕೋರಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಮನವಿ ಸಲ್ಲಿಸಿತ್ತು.
ಶತಮಾನದಷ್ಟು ಹಳೆಯದಾದ ಕಾವೇರಿ ವಿವಾದ ಕುರಿತು ತಾನು ನೀಡಿರುವ 465 ಪುಟಗಳ ತೀರ್ಪಿಗೆ ಅನುಗುಣವಾಗಿ ಯೋಜನೆಯೊಂದರನ್ನು ರೂಪಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ತನ್ನ ವರದಿಯಲ್ಲಿ ತಿಳಿಸಿದೆ. ಕಾವೇರಿ ಜಲ ವಿವಾದಗಳ ನ್ಯಾಯಾಧಿಕರಣ(ಸಿಡಬ್ಲ್ಯುಡಿಟಿ)ದ 2007ರಲ್ಲಿ ನೀಡಿದ್ದ ಆದೇಶವನ್ನು ಅದು ಮಾರ್ಪಡಿಸಿದ್ದು, ಯಾವುದೇ ಕಾರಣಕ್ಕೂ ಕಾಲವನ್ನು ವಿಸ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಫೆ.16ರಂದು ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್, ಕರ್ನಾಟಕಕ್ಕೆ ಕಾವೇರಿ ನೀರಿನ ಪಾಲನ್ನು 270 ಟಿಎಂಸಿ ಅಡಿಗಳಿಗೆ ಹೆಚ್ಚಿಸಿತ್ತು(14.75 ಟಿಎಂಸಿ ಹೆಚ್ಚುವರಿ) ಹಾಗೂ ನದಿ ಪಾತ್ರದಿಂದ 10 ಟಿಎಂಸಿ ಅಡಿ ಅಂತರ್ಜಲವನ್ನು ಬಳಸಿಕೊಳ್ಳಲು ಅವಕಾಶ ನೀಡಿ ತಮಿಳುನಾಡಿನ ಪಾಲಿನಲ್ಲಿ ಕಡಿಮೆ ಮಾಡಿತ್ತು.
ಸುಪ್ರೀಂಕೋರ್ಟ್ ತೀರ್ಪಿನೊಂದಿಗೆ ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿಯು ಒಟ್ಟು 740 ಟಿಎಂಸಿ ಅಡಿಯಲ್ಲಿ ವರ್ಷಕ್ಕೆ ಅನುಕ್ರಮವಾಗಿ 404.25 ಟಿಎಂಸಿ ಅಡಿ, 284.75, 30 ಹಾಗೂ 7 ಟಿಎಂಸಿ ಅಡಿಗಳಷ್ಟು ನೀರನ್ನು ಹೊಂದಲಿವೆ.