ಕುವೈತ್ ನಲ್ಲಿ ಭೀಕರ ರಸ್ತೆ ಅಪಘಾತ: 7 ಭಾರತೀಯರು ಸೇರಿ 15 ಮಂದಿ ದುರ್ಮರಣ

ಕುವೈತ್: ಕುವೈತ್ ನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಭಾರತೀಯರೂ ಸೇರಿದಂತೆ ಒಟ್ಟು 15 ಮಂದಿ ಸಾವನ್ನಪ್ಪಿದ್ದಾರೆ.

ಪೆಟ್ರೋಲಿಯಂ ಕಾರ್ಖಾನೆಗೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಎರಡು ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿ ಈ ಧಾರುಣ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಕೂಡಲೇ ಕುವೈತ್ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ವೇಗವಾಗಿ ಚಲಿಸುತ್ತಿದ್ದ ಬಸ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗಿದೆ.  ಅಂತೆಯೇ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವನ್ನಪ್ಪಿದ ಕಾರ್ಮಿಕರೆಲ್ಲರೂ ಕುವೈತ್ ಆಯಿಲ್ ಕಂಪನಿಯ ಕಾರ್ಮಿಕರು ಎಂದು ತಿಳಿದುಬಂದಿದೆ.

ಇನ್ನು ಮೃತ ಕಾರ್ಮಿಕರ ಪೈಕಿ 7 ಭಾರತೀಯರಿದ್ದು, ಉಳಿದಂತೆ ಐದು ಮಂದಿ ಈಜಪ್ಟಿಯನ್ನರ ಮತ್ತು ಮೂವರು ಪಾಕಿಸ್ತಾನ ಮೂಲದ ಕಾರ್ಮಿಕರು ಎನ್ನಲಾಗಿದೆ. ಗಾಯಾಳುಗಳಲ್ಲಿ ಭಾರತೀಯರು ಮತ್ತು ಕುವೈತ್ ಪ್ರಜೆಗಳು ಸೇರಿದ್ದಾರೆ ಎಂದು ತಿಳಿದುಬಂದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ