ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್‍ಶೀಟ್ ಕಸದ ಬುಟ್ಟಿಗೆ ಹಾಕಲು ಲಾಯಕ್ಕಾಗಿದ್ದು, ಅದನ್ನು ಗುಜರಿಗೆ ಹಾಕಿದರೆ ಬಿಜೆಪಿಗೆ ಕೊಂಚ ದುಡ್ಡು ಸಿಗಬಹುದು: ಗೃಹ ಸಚಿವ ರಾಮಲಿಂಗಾರೆಡ್ಡಿ ಲೇವಡಿ

ಬೆಂಗಳೂರು,ಏ.2-ಬಿಜೆಪಿ ನಿನ್ನೆ ಕಾಂಗ್ರೆಸ್ ಸರ್ಕಾರದ ವಿರುದ್ಧ್ದ ಬಿಡುಗಡೆ ಮಾಡಿರುವ ಚಾರ್ಜ್‍ಶೀಟ್ ಕಸದ ಬುಟ್ಟಿಗೆ ಹಾಕಲು ಲಾಯಕ್ಕಾಗಿದ್ದು ಕನಿಷ್ಠ ಅದನ್ನು ಗುಜರಿ ಪೇಪರ್‍ಗೆ ಹಾಕಿದರೆ ಬಿಜೆಪಿ ಅವರಿಗೆ ಕೊಂಚ ದುಡ್ಡು ಸಿಗಬಹುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಲೇವಡಿ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಬಿಡುಗಡೆ ಮಾಡಿದ ಚಾರ್ಜ್‍ಶೀಟ್ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಅದು ಒಂದು ಸುಳ್ಳಿನ ಕಂತೆ, ಕೇಂದ್ರ ಕಾನೂನು ಸಚಿವ ರವಿಶಂಕರ್‍ಪ್ರಸಾದ್ ಅವರಿಗೆ ಕಾನೂನೇ ಗೊತ್ತಿಲ್ಲ. ಹಾಗಾಗಿ ಬೇಜವಾಬ್ದಾರಿತನದಿಂದ ಚಾರ್ಜ್ ಶೀಟ್ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.

ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ, ಬೇರೆಯವರ ತಟ್ಟೆಯಲ್ಲಿ ನೊಣ ಹುಡುಕುವುದು ಬಿಜೆಪಿಯವರ ಚಾಳಿ. ಚುನಾವಣೆ ಇರುವುದರಿಂದ ರಾಜಕೀಯಕ್ಕಾಗಿ ಚಾರ್ಜ್‍ಶೀಟ್ ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿಗೆ ಕಸದ ನಗರಿ ಎಂದು ಹೆಸರು ತಂದುಕೊಟ್ಟವರು ಬಿಜೆಪಿಯವರು. ನಮ್ಮ ಕಾಲದಲ್ಲಿ ಡೈನಾಮಿಕ್ ಸಿಟಿ ಎಂಬ ಹೆಗ್ಗಳಿಕೆ ಸಿಕ್ಕಿದೆ.

ಇಂದಿರಾ ಕ್ಯಾಂಟಿನ್ ಬಗ್ಗೆ ಬಿಬಿಸಿ ನ್ಯೂಸ್ ಚಾನೆಲ್ ಮೆಚ್ಚುಗೆ ವ್ಯಕ್ತಪಡಿಸಿದೆ. ನಮ್ಮ ಸರ್ಕಾರ ಜಾರಿಗೆ ತಂದ ಕೃಷಿ ಹೊಂಡ ಯೋಜನೆಯನ್ನು ಇತರೆ ರಾಜ್ಯಗಳು ಮಾದರಿಯಾಗಿ ಅನುಸರಿಸುತ್ತಿವೆ. ಬಿಜೆಪಿಯವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಹೇಳಿದರು.
ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಉತ್ತಮವಾಗಿದೆ. ಬಿಜೆಪಿ ಸರ್ಕಾರ ಅಧಿಕಾರವಿದ್ದಾಗ ನಗರದ ಜನಸಂಖ್ಯೆ 90 ಲಕ್ಷದಷ್ಟು ಇತ್ತು. ಆದರೂ 1.12 ಲಕ್ಷ ಅಪರಾಧಗಳು ನಡೆದಿದ್ದವು. ನಮ್ಮ ಸರ್ಕಾರದ ವೇಳೆ ಜನಸಂಖ್ಯೆ 1.24 ಕೋಟಿ ಆಗಿದೆ. ಅಪರಾಧಗಳ ಸಂಖ್ಯೆ 1.13 ಲಕ್ಷದಷ್ಟಿದೆ. ಬಿಜೆಪಿ ಸರ್ಕಾರದಲ್ಲಿ 8,885 ಕೊಲೆ, 9648 ದರೋಡೆ, 2922 ಅತ್ಯಾಚಾರ, 4675 ಸರ ಅಪಹರಣ, 1,06,342 ಹಲ್ಲೆ ಪ್ರಕರಣಗಳು, 660 ಖೋಟಾನೋಟು ಪ್ರಕರಣಗಳು ನಡೆದಿದ್ದವು.
ನಮ್ಮ ಸರ್ಕಾರದಲ್ಲಿ 7750 ಕೊಲೆ, 5542 ದರೋಡೆ, 3833 ಅತ್ಯಾಚಾರ, 5359 ಸರ ಅಪಹರಣ, 93,896 ಹಲ್ಲೆ ಪ್ರಕರಣ, 306 ಖೋಟಾನೋಟು ಪ್ರಕರಣ ನಡೆದಿದೆ.

ಅತ್ಯಾಚಾರ, ಸರ ಅಪಹರಣ ಹೊರತುಪಡಿಸಿ ಉಳಿದೆಲ್ಲ ಅಪರಾಧಗಳು ಬಿಜೆಪಿ ಸರ್ಕಾರಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ನಡೆದಿದೆ ಎಂದು ವಿವರಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ಎಲ್ಲೆಡೆ ಬೇರೆ ರಾಜ್ಯಗಳಲ್ಲಿ ಗಲಭೆ ಮಾಡಿಸುತ್ತಿದ್ದಾರೆ. ನಮ್ಮಲ್ಲಿ ಅದಕ್ಕೆ ಅವಕಾಶವಿಲ್ಲ. ಬಿಗಿ ಕ್ರಮಗಳನ್ನು ಕೈಗೊಂಡಿದ್ದೇವೆ. ಮತ್ತೊಂದು ಅವಧಿಗೆ ನಮ್ಮದೇ ಸರ್ಕಾರ ಬರಲಿದ್ದು , ಗಲಭೆ ಮಾಡಿಸುವ ಬಿಜೆಪಿ ಫ್ಯಾಕ್ಟರಿಗಳನ್ನು ಸಂಪೂರ್ಣ ಮುಚ್ಚಿಸುತ್ತೇವೆ. ಈಗಾಗಲೇ ಆ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ ಎಂದರು.

ಅಮಿತ್ ಷಾಗೆ ತಿರುಗೇಟು:
ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಷಾ ಮೊಸಳೆ ಕಣ್ಣೀರು ಸುರಿಸುವ ಬದಲು ರೈತರಿಗಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳೇನು ಎಂದು ಬಹಿರಂಗಪಡಿಸಲಿ ಎಂದು ರಾಮಲಿಂಗಾರೆಡ್ಡಿ ಸವಾಲು ಹಾಕಿದರು.
ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ವರ್ಷಕ್ಕೆ 12 ಸಾವಿರ ರೈತರು ದೇಶಾದ್ಯಂತ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಸಂಸತ್‍ನಲ್ಲಿ ಹೇಳಿಕೆ ನೀಡಿದೆ. ಹೀಗಿರುವಾಗ ರೈತರ ಬಗ್ಗೆ ಚುನಾವಣಾ ಕಾಲದಲ್ಲಿ ಕಣ್ಣೀರು ಹಾಕುವ ನಾಟಕ ಏಕೆ ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

ರೈತರ ಆತ್ಮಹತ್ಯೆಯಲ್ಲಿ ರಾಜ್ಯ ದೇಶದಲ್ಲೇ 3ನೇ ಸ್ಥಾನದಲ್ಲಿದೆ. ಬಿಜೆಪಿ ಆಡಳಿತದಲ್ಲಿರುವ ಮಹಾರಾಷ್ಟ್ರ ನಂ.1 ಸ್ಥಾನದಲ್ಲಿದ್ದು , ಮಧ್ಯಪ್ರದೇಶ, 2ನೇ ಸ್ಥಾನದಲ್ಲಿದೆ. ಅಮಿತ್ ಷಾ ಮೊದಲು ಈ ರಾಜ್ಯಗಳಿಗೆ ಹೋಗಿ ರೈತರ ಆತ್ಮಹತ್ಯೆಯನ್ನು ನಿಲ್ಲಿಸಲಿ. ನಮ್ಮ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ ಹಲವಾರು ಯೋಜನೆಗಳ ಮೂಲಕ ನೈತಿಕ ಬೆಂಬಲ ನೀಡಿದೆ ಎಂದರು.

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಿ ಧೈರ್ಯ ತುಂಬುತ್ತಿದ್ದೇವೆ. ಸಾಲ ಮನ್ನ ಮಾಡಿಸಲು ಕೇಂದ್ರಕ್ಕೆ ಮುಖ್ಯಮಂತ್ರಿ ನಿಯೋಗ ಕರೆದುಕೊಂಡು ಹೋದಾಗ ಬಾಯ್ಬಿಟ್ಟು ಒಂದು ಮಾತನ್ನೂ ಆಡಲಿಲ್ಲ. ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಬದಲಾಗಿ ಬ್ಯಾಂಕ್ ಹಣವನ್ನು ಲೂಟಿ ಮಾಡಿ ಓಡಿ ಹೋಗುವ ಉದ್ಯಮಿಗಳ ಮೇಲೆ ಸಹಾನೂಭೂತಿ ಇದೆ. ಅದನ್ನೇ ರೈತರ ಮೇಲೂ ತೋರಿಸಿದರೆ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುತ್ತಿತ್ತು ಎಂದು ತಿರುಗೇಟು ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ