ನವದೆಹಲಿ, ಏ.2-ವಿವಿಧ ರಾಜ್ಯಗಳ ಮೂಲಕ ಹರಿದು ಹೋಗುವ ಒಂದು ನದಿ ಮೇಲೆ ಯಾವುದೇ ರಾಜ್ಯವಾಗಲಿ ವಿಶೇಷ ಅಧಿಕಾರ ಹೊಂದಿರುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿರುವ ಸುಪ್ರೀಂಕೋರ್ಟ್, ಎಲ್ಲ ರಾಜ್ಯಗಳಿಗೂ ಕುಡಿಯುವ ನೀರು ದಕ್ಕಬೇಕು ಎಂಬುದು ಪ್ರಥಮ ಆದ್ಯತೆಯಾಗಿರುತ್ತದೆ. ಇದರಲ್ಲಿ ಹಕ್ಕು ಚಲಾವಣೆ ಮಾಡುವಂತಿಲ್ಲ ಎಂದು ಒತ್ತಿ ಹೇಳಿದೆ.
ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ(ಸಿಎಂಬಿ) ರಚನೆ ಮಾಡದಿರುವ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಬಗ್ಗೆ ವಿಚಾರಣೆ ನಡೆಸಲು ನ್ಯಾಯಾಲಯ ಇಂದು ಸಮ್ಮತಿಸಿದೆ.
ಕರ್ನಾಟಕದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕಾವೇರಿ ನಿರ್ವಹಣಾ ಮಂಡಳಿಯನ್ನು ಸದ್ಯಕ್ಕೆ ರಚಿಸಲು ಸಾಧ್ಯವಿಲ್ಲ ಎಂದು ಈಗಾಗಲೇ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿದೆ ಹಾಗೂ ಈ ಬಗ್ಗೆ ಏ.9ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿರುವುದರಿಂದ ಕರ್ನಾಟಕಕ್ಕೆ ಸದ್ಯಕ್ಕೆ ತಾತ್ಕಾಲಿಕವಾಗಿ ನಿರಾಳವಾದಂತಾಗಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು ಈ ಪ್ರಕರಣದ ವಿಚಾರಣೆಯನ್ನು ಏ.9ಕ್ಕೆ ಮುಂದೂಡಿದೆ.
ನೀರು ಲಭಿಸುತ್ತಿಲ್ಲ ಎಂಬ ತಮಿಳುನಾಡಿನ ಕಷ್ಟದ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ. ಈ ಸಮಸ್ಯೆಯನ್ನು ನಾವು ಇತ್ಯರ್ಥಗೊಳಿಸುತ್ತೇವೆ. ಏ.9ರಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ ಎಂದು ಪೀಠ ಹೇಳಿದೆ.
ಇದೇ ವೇಳೆ ಸ್ಕೀಂ ಬಗ್ಗೆ ಉದ್ಭವಿಸಿರುವ ಗೊಂದಲದ ಬಗ್ಗೆ ಸ್ಪಷ್ಟೀಕರಣ ನೀಡಿರುವ ಸುಪ್ರೀಂಕೋರ್ಟ್, ಸ್ಕೀಂ ಎಂದರೆ ನಿರ್ವ ಹಣಾ ಮಂಡಳಿ ಅಲ್ಲ, ನಿರ್ವಹಣಾ ಮಂಡಳಿ ರಚಿಸಿ ಎಂಬುದಕ್ಕೆ ಇದು ಸೂಚನೆಯಲ್ಲ ಎಂಬ ಅಂಶವನ್ನೂ ಸುಪ್ರೀಂಕೋರ್ಟ್ ಉಲ್ಲೇಖಿಸಿದೆ.
ತಮಿಳುನಾಡು ನೀರಾವರಿ ಪ್ರದೇಶದ ಬಗ್ಗೆ ನಿಖರವಾಗಿ ಮೌಲ್ಯಾಂಕನ ಮಾಡಿಲ್ಲ ಎಂಬ ಅಂಶವನ್ನು ತಿಳಿಸಿರುವ ಸುಪ್ರೀಂಕೋರ್ಟ್ ಪೀಠವು ಅಂತರ್ಜಲದ ಲಭ್ಯತೆ ಬಗ್ಗೆ ಪರಿಗಣಿಸಲಾಗಿಲ್ಲ ಎಂಬುದನ್ನು ತಿಳಿಸಿದೆ.
ವಿವಿಧ ರಾಜ್ಯಗಳ ಮೂಲಕ ಹರಿದು ಹೋಗುವ ಒಂದು ನದಿ ಮೇಲೆ ಯಾವುದೇ ರಾಜ್ಯವಾಗಲಿ ವಿಶೇಷ ಅಧಿಕಾರ ಹೊಂದಿರುವುದಿಲ್ಲ. ಎಲ್ಲ ರಾಜ್ಯಗಳಿಗೂ ಕುಡಿಯುವ ನೀರು ದಕ್ಕಬೇಕು ಎಂಬುದು ಪ್ರಥಮ ಆದ್ಯತೆಯಾಗಿರುತ್ತದೆ. ಇದರಲ್ಲಿ ಹಕ್ಕು ಚಲಾವಣೆ ಮಾಡುವಂತಿಲ್ಲ ಎಂದು ಪೀಠವು ತಿಳಿಸಿದೆ.
ಸುಪ್ರೀಂಕೋರ್ಟ್ ಫೆ.16ರಂದು ನೀಡಿದ ಆದೇಶದಂತೆ ಆರು ವಾರಗಳ ಒಳಗಾಗಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವುದಕ್ಕಾಗಿ ಯೋಜನೆ ಸಿದ್ದಪಡಿಸಲು ಹಾಗೂ ಕಾವೇರಿ ಜಲ ನಿಬಂಧನೆ ಸಮಿತಿಯನ್ನು ರೂಪಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ಕೇಂದ್ರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ಕಾವೇರಿ ನ್ಯಾಯಮಂಡಳಿ ರಚನೆಗೆ ಕರ್ನಾಟಕ ತೀವ್ರ ವಿರೋಧ ವ್ಯಕ್ತಪಡಿಸಿ ತೀರ್ಪು ಅನುಷ್ಠಾನಕ್ಕಾಗಿ ಪರ್ಯಾಯ ವ್ಯವಸ್ಥೆಗಾಗಿ ಮನವಿ ಸಲ್ಲಿಸಿತ್ತು.
ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವುದರಿಂದ ಕಾವೇರಿ ನಿರ್ವಹಣಾ ಮಂಡಳಿ ರಚಿಸಿದರೆ ಅದು ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ಸ್ಪಷ್ಟಪಡಿಸಿ ಕೇಂದ್ರ ಸರ್ಕಾರ ಈಗಾಗಲೇ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ.
ಕಾವೇರಿ ನಿರ್ವಹಣಾ ಮಂಡಳಿಯನ್ನು ತಕ್ಷಣ ರಚಿಸಲು ಪ್ರಸ್ತುತ ಸನ್ನಿವೇಶದಲ್ಲಿ ಸಾಧ್ಯವಾಗುವುದಿಲ್ಲ. ಚುನಾವಣೆ ಪ್ರಯುಕ್ತ ಈ ಬಗ್ಗೆ ಸದ್ಯಕ್ಕೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಪ್ರಮಾಣ ಪತ್ರದಲ್ಲಿ ಸ್ಪಷ್ಟಪಡಿಸಿದೆ.
ತಮಿಳುನಾಡಿನಲ್ಲಿ ವ್ಯಾಪಕ ಪ್ರತಿಭಟನೆ: ಕಾವೇರಿ ನ್ಯಾಯಮಂಡಳಿ ರಚನೆಗೆ ಆಗ್ರಹಿಸಿ ಒಂದೆಡೆ ಸಂಸತ್ತಿನ ಉಭಯ ಸದನಗಳಲ್ಲಿ ಎಐಎಡಿಎಂಕೆ ಮತ್ತು ಡಿಎಂಕೆ ಪ್ರತಿಭಟನೆ ಮುಂದುವರಿಸಿದ್ದರೆ, ಅತ್ತ ತಮಿಳುನಾಡಿನಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದೆ.
ಡಿಎಂಕೆ ಕಾರ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಇಂದು ಬೆಳಗ್ಗೆಯಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗಿದೆ.
ತಮಿಳುನಾಡಿನ ವಿವಿಧೆಡೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ಎಐಎಡಿಎಂಕೆ ಮತ್ತು ಡಿಎಂಕೆ ಕಾರ್ಯಕರ್ತರು ರಸ್ತೆ ತಡೆ ಮತ್ತು ಪ್ರತಿಭಟನೆ ನಡೆಸಿದರು. ಈ ಸಂಬಂಧ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕೊಯಮತ್ತೂರಿನಲ್ಲಿ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಾಹುತಿಗೆ ಯತ್ನಿಸಿದ ಇಬ್ಬರು ಡಿಎಂಕೆ ಕಾರ್ಯಕರ್ತರನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.