ಡೆಹ್ರಾಡೂನ್: ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಹಾಗೂ ಹರಿದ್ವಾರದ ಬಿಜೆಪಿ ಸಂಸದ ರಮೇಶ್ ಪೋಖ್ರಿಯಾಲ್ ಅವರ ಪುತ್ರಿ ಡಾ. ಶ್ರೇಯಸಿ ನಿಶಾಂಕ್ ಶನಿವಾರ ಸೇನೆಗೆ ಸೇರ್ಪಡೆಗೊಂಡಿದ್ದಾರೆ. ರೂರ್ಕಿಯಲ್ಲಿನ ಸೇನಾ ಆಸ್ಪತ್ರೆಯಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ.
ಈ ಬಗ್ಗೆ ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ಸಂಸದ ರಮೇಶ್ ಬರೆದುಕೊಂಡಿದ್ದು, ಪುತ್ರಿಯೊಂದಿಗಿನ ಚಿತ್ರವನ್ನೂ ಪ್ರಕಟಿಸಿದ್ದಾರೆ. ಸೇನಾ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಶ್ರೇಯಸಿಗೆ ಸ್ಟಾರ್ ತೊಡಿಸಿ, ವಿಧ್ಯುಕ್ತವಾಗಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಸೇನೆಯ ವೈದ್ಯಕೀಯ ತುಕಡಿಯಲ್ಲಿ ಅವರು ಸೇವೆ ಸಲ್ಲಿಸಲಿದ್ದಾರೆ. ಶ್ರೇಯಸಿ ಅವರು ಹೃಷಿಕೇಶದಲ್ಲಿ ಎಂಬಿಬಿಎಸ್ ಹಾಗೂ ಮಾರಿಷಸ್ನಲ್ಲಿ ಉನ್ನತ ಅಧ್ಯಯನ ನಡೆಸಿದ್ದಾರೆ.
ನನ್ನ ಪುತ್ರಿ ಸೇನೆಗಾಗಿ ಕೆಲಸ ಮಾಡುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ. ನಮ್ಮ ಕುಟುಂಬದಲ್ಲಿ ಇದೇ ಮೊದಲ ಬಾರಿಗೆ ನನ್ನ ಪುತ್ರಿ ಸೇನೆಗೆ ಸೇರಿದ್ದಾಳೆ. ನನ್ನ ಕುಟುಂಬದಲ್ಲಿ ಯಾರಾದರೂ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂದು ನಾನು ಬಯಸಿದ್ದೆ. ಇದು ನನ್ನ ಪುತ್ರಿಯ ಮೂಲಕ ಸಾಧ್ಯವಾಯಿತು. ಇದಕ್ಕಿಂತ ಹೆಮ್ಮೆ ಬೇರೆ ಇನ್ನೇನಿಲ್ಲ ಎಂದು ರಮೇಶ್ ಹೇಳಿಕೊಂಡಿದ್ದಾರೆ.