ಬೆಂಗಳೂರು, ಏ.2- ಚಾಮಜರಾಪೇಟೆ ಟಿಕೆಟ್ ಆಕಾಂಕ್ಷಿಯಾಗಿದ್ದ ಜೆಡಿಎಸ್ ಮುಖಂಡ ಇಮ್ರಾನ್ ಪಾಷ ಅವರ ಮನವೊಲಿಸುವಲ್ಲೂ ಕೂಡ ಯಶಸ್ವಿಯಾಗಿರುವ ಮಾಜಿ ಪ್ರಧಾನಿ ದೇವೇಗೌಡರು ಜಮೀರ್ ಅಹಮ್ಮದ್ ಖಾನ್ ಅವರನ್ನು ಸೋಲಿಸಲು ವ್ಯೂಹ ರಚಿಸಿದ್ದಾರೆ.
ಇಂದು ಜಮೀರ್ ಅವರನ್ನು ಸೋಲಿಸಲು ಹಠಕ್ಕೆ ಬಿದ್ದಿರುವ ದೇವೇಗೌಡರು ಸೀಮಾ ಅವರ ಪತಿ ಅಲ್ತಾಫ್ ಖಾನ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಚಾಮರಾಜಪೇಟೆಯಿಂದ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ.
ಇದುವರೆಗೆ ಇಮ್ರಾನ್ಪಾಷ ಅವರನ್ನು ಜೆಡಿಎಸ್ನಿಂದ ಕಣಕ್ಕಿಳಿಸಲು ನಿರ್ಧರಿಸಲಾಗಿತ್ತು ಎಂದು ಹೇಳಲಾಗಿತ್ತು. ಆದರೆ, ಇಂದು ಅಲ್ತಾಫ್ ಖಾನ್ ಅವರನ್ನು ಜೆಡಿಎಸ್ಗೆ ಕರೆತಂದು ಚಾಮರಾಜಪೇಟೆಯಿಂದ ಅಭ್ಯರ್ಥಿ ಎಂದು ಟಿಕೆಟ್ ಘೋಷಿಸಿದ ಹಿನ್ನೆಲೆಯಲ್ಲಿ ಇಮ್ರಾನ್ ಪಾಷ ಅವರು ಏನಾದರೂ ಬೇಸತ್ತು ಪಕ್ಷ ತೊರೆಯಬಹುದು ಎಂಬ ಆತಂಕವಿತ್ತು. ಆದರೆ, ದೇವೇಗೌಡರು ಬಹು ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ಇಮ್ರಾನ್ ಪಾಷ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಯಾವುದೇ ಭಿನ್ನಮತ, ಅಸಮಾಧಾನ ಇಲ್ಲದಂತೆ ನೋಡಿಕೊಂಡಿದ್ದಾರೆ. ಜಮೀರ್ ಬಲಗೈ ಭಂಟನಂತಿದ್ದ ಇಮ್ರಾನ್ ಪಾಷ ಅವರನ್ನು ಬಿಬಿಎಂಪಿಯಲ್ಲಿ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಚಾಮರಾಜಪೇಟೆಗೆ ಜಮೀರ್ ವಿರುದ್ಧ ಅಭ್ಯರ್ಥಿ ಎಂದು ಹೇಳಿದ್ದರು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಇಮ್ರಾನ್ ಅಷ್ಟು ಸಮರ್ಥ ಅಲ್ಲದ ಕಾರಣ ಅಲ್ತಾಫ್ನನ್ನು ಕಣಕ್ಕಿಳಿಸಲು ನಿರ್ಧರಿಸಿ ಇಮ್ರಾನ್ ಅವರನ್ನು ಕೂಡ ತಮ್ಮ ಜತೆಗಿಟ್ಟುಕೊಂಡು ಇಮ್ರಾನ್-ಅಲ್ತಾಫ್ ಜೋಡಿಯೊಂದಿಗೆ ಜಮೀರ್ರನ್ನು ಮಣಿಸಲು ದೇವೇಗೌಡರು ತಂತ್ರ ಹೆಣೆದಿದ್ದಾರೆ. ಇದಕ್ಕೆ ಇಮ್ರಾನ್ ಪಾಷ ಕೂಡ ಓಕೆ ಎಂದಿದ್ದಾರೆ.
ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಇಮ್ರಾನ್ ಅವರನ್ನು ಉಪಮೇಯರ್ ಮಾಡುವುದಾಗಿ ಗೌಡರು ಭರವಸೆ ಕೂಡ ನೀಡಿದ್ದಾರೆ. ಇದಲ್ಲದೆ, ಜಮೀರ್ ಅಹಮ್ಮದ್ ಕಾಂಗ್ರೆಸ್ಗೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನೂ ತನ್ನತ್ತ ಸೆಳೆಯುವಲ್ಲಿ ಗೌಡರು ಯಶಸ್ವಿಯಾಗಿದ್ದಾರೆ.
ಅತೃಪ್ತ ಕಾಂಗ್ರೆಸ್ ಮುಖಂಡರು ಜೆಡಿಎಸ್ನತ್ತ ಮುಖ ಮಾಡಿರುವುದು ಗೌಡರಿಗೆ ಆನೆಬಲ ಬಂದಂತಾಗಿದೆ.
ಒಟ್ಟಾರೆ ಚಾಮರಾಜಪೇಟೆಯಲ್ಲಿ ಜಮೀರ್ರನ್ನು ಮಣಿಸಲು ಜೆಡಿಎಸ್ ಬಾವುಟ ಹಾರಿಸಲು ದೇವೇಗೌಡರು ರಣತಂತ್ರ ರೂಪಿಸಿದ್ದಾರೆ.