ಬೆಂಗಳೂರು, ಏ.1-ರಾಜ್ಯವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ವೆಬ್ಸೈಟ್ನಲ್ಲಿರುವ ಸಚಿವರ ಭಾವಚಿತ್ರವನ್ನು ತೆಗೆದು ಹಾಕಲು ಸರ್ಕಾರ ಆದೇಶಿಸಿದೆ.
ಮೇ 12 ರಂದು ರಾಜ್ಯವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಮ್ಮ ತಮ್ಮ ಇಲಾಖೆಯ ಅಧೀನ ಕಚೇರಿ, ನಿಗಮ ಮಂಡಳಿ, ಸ್ವಾಯತ್ತ ಸಂಸ್ಥೆಗಳು ಹಾಗೂ ವೆಬ್ಸೈಟ್ನಲ್ಲಿರುವ ಸಚಿವರ, ಶಾಸಕರ, ಭಾವಚಿತ್ರಗಳನ್ನು ತೆಗೆದುಹಾಕಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ.
ಕೇಂದ್ರ ಚುನಾವಣಾ ಆಯೋಗದ ಸೂಚನೆ ಹಿನ್ನೆಲೆಯಲ್ಲಿ ಸಚಿವರ, ಶಾಸಕರ ಭಾವಚಿತ್ರಗಳನ್ನು ತೆಗೆದುಹಾಕಲು ಕ್ರಮಕೈಗೊಳ್ಳುವಂತೆ 38 ಇಲಾಖೆಗಳ ಎಲ್ಲಾ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಪ್ರಧಾನಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳಿಗೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.