ಇಂದೋರ್, ಏ.1-ಮಧ್ಯಪ್ರದೇಶದ ಇಂದೋರ್ನಲ್ಲಿ ಕಳೆದ ರಾತ್ರಿ ಮೂರು ಅಂತಸ್ತುಗಳ ಹೋಟೆಲ್ ಕಟ್ಟಡವೊಂದು ಕುಸಿದು 10 ಮಂದಿ ದುರಂತ ಸಾವಿಗೀಡಾಗಿದ್ದಾರೆ. ಈ ದುರ್ಘಟನೆಯಲ್ಲಿ ಕೆಲವರಿಗೆ ತೀವ್ರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.
ಇಂದೋರ್ನ ಸರ್ವಟೆ ಬಸ್ ನಿಲ್ದಾಣದ ಬಳಿ ಇದ್ದ ಲಾಡ್ಜ್ ಮತ್ತು ಹೋಟೆಲ್ ಕಟ್ಟಡ ನಿನ್ನೆ ಮಧ್ಯರಾತ್ರಿ ಕುಸಿದು ಬಿತ್ತು. ಗಾಯಗೊಂಡವರಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಛೋಟಿ ಗ್ವಾಲ್ಟೋಲಿ ಪೆÇಲೀಸ್ ಠಾಣೆ ಇನ್ಸ್ಪೆಕ್ಟರ್ ಸಂಜು ಕಮ್ಲೆ ತಿಳಿಸಿದ್ದಾರೆ.
ದುರಂತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನು ಆರು ಮಂದಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದರು. ಮೃತರಲ್ಲಿ ಇಬ್ಬರು ಮಹಿಳೆಯರಿದ್ದಾರೆ. ದುರ್ಘಟನೆಯಲ್ಲಿ ಕೆಲವರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು 60 ವರ್ಷಗಳಷ್ಟು ಹಳೆಯದಾದ ಈ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ನಿನ್ನೆ ತಡರಾತ್ರಿ ಕಾರೊಂದು ಕಟ್ಟಡದ ಮುಖ್ಯ ಆಧಾರ ಕಂಬಕ್ಕೆ ಡಿಕ್ಕಿ ಹೊಡೆದ ಕಾರಣ ಅದು ಕುಸಿದು ಬಿದ್ದಿರಬಹುದೆಂದು ಶಂಕಿಸಲಾಗಿದೆ. ಕಟ್ಟಡದ ಭಗ್ನಾವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಿನ್ನೆ ಮಧ್ಯರಾತ್ರಿಯಿಂದ ನಡೆಯುತ್ತಿದೆ. ಉರುಳಿಬಿದ್ದ ಕಟ್ಟಡದ ಅಡಿ ಸಿಲುಕಿರಬಹುದಾದ ಮಂದಿಗಾಗಿ ತೀವ್ರ ಶೋಧ ನಡೆಯಿತು. ಈ ದುರ್ಘಟನೆಗೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.