ಬೆಂಗಳೂರು,ಏ.1-ಕೇಂದ್ರ ಸರ್ಕಾರ ಕೆಲವೊಂದು ನ್ಯಾಯಾಧೀಕರಣಗಳನ್ನು ರದ್ದುಪಡಿಸಿ ನ್ಯಾಯಾಧೀಕರಣದ ಪ್ರಮಾಣವನ್ನು ಇಳಿಸಲು ಚಿಂತನೆ ನಡೆಸಿದೆ ಎಂದು ಕೇಂದ್ರ ಅಂಕಿ-ಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.
ಬಿಜೆಪಿ ಸಣ್ಣ ಮತ್ತು ಮಧ್ಯಮ ಉದ್ಯೋಗ ಕೈಗಾರಿಕೆ ಪ್ರಕೋಷ್ಠ ಹಾಗೂ ನವಕರ್ನಾಟಕ ಜನಪರ ಶಕ್ತಿ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಸ್ತುತ 36ರಿಂದ 37 ವಿವಿಧ ನ್ಯಾಯಾಧೀಕರಣಗಳಿದ್ದು, ಅವುಗಳನ್ನು 16ಕ್ಕೆ ಇಳಿಸಲಾಗುವುದು. ಕೆಲವರಿಗೆ ನ್ಯಾಯಾಧೀಕರಣಗಳು ಪುನರ್ವಸತಿ ಕೇಂದ್ರಗಳಾಗುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಗೊಂದಲ ಉಂಟು ಮಾಡುವ ಕಾನೂನುಗಳನ್ನು ರದ್ದುಪಡಿಸಲಾಗುತ್ತಿದ್ದು, ಇದುವರೆಗೆ 1187 ಕಾನೂನುಗಳನ್ನು ರದ್ದುಪಡಿಸಿದೆ. ಕಾರ್ಮಿಕ ಇಲಾಖೆಯಲ್ಲೂ 38 ಕಾನೂನುಗಳಿದ್ದು, ಅವುಗಳನ್ನು 9ರಿಂದ 10ಕ್ಕೆ ಇಳಿಸಿ ಕಾನೂನು ಮಾಡಿದರೆ ಪಾರದರ್ಶಕ ಹಾಗೂ ಒಳ್ಳೇ ರೀತಿ ಉದ್ಯಮಿ ಮತ್ತು ಕಾರ್ಮಿಕರ ನಡುವೆ ಬಾಂಧವ್ಯ ಏರ್ಪಡಿಸಬಹುದಾಗಿದೆ ಎಂದು ಹೇಳಿದರು.
ದೇಶದಲ್ಲಿ ಆರ್ಥಿಕ ಶಿಸ್ತು ತರಲು ದಿಟ್ಟ ಹೆಜ್ಜೆಯನ್ನು ಕೇಂದ್ರ ಸರ್ಕಾರ ಇಟ್ಟಿದೆ. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಅನಾನುಕೂಲವಾಗುವ ಕಾನೂನುಗಳ ಬಗ್ಗೆ ಅಧಿಕಾರಿಗಳು ಮತ್ತು ಉದ್ಯಮಿಗಳೊಂದಿಗೆ ಸಮಾಲೋಚಿಸಿ ಪರಿಹರಿಸುವ ಭರವಸೆ ನೀಡಿದರು.
ಚುನಾವಣೆ ನೀತಿಸಂಹಿತೆ ಜಾರಿಯಾಗುವ ಮುನ್ನ ಉದ್ಯಮಿಗಳೊಂದಿಗೆ ಸಂವಾದ ನಡೆದಿದ್ದರೆ ಚೆನ್ನಾಗಿತ್ತು, ನೀತಿ ಸಂಹಿತೆ ಜಾರಿಯಾಗಿರುವುದರಿಂದ ಭರವಸೆ ನೀಡಲು ಸಾಧ್ಯವಾಗುವುದಿಲ್ಲ. ಆದರೆ, ನಾಲ್ಕು ವರ್ಷದಲ್ಲಿ ಕೇಂದ್ರ ಸರ್ಕಾರ ಅಭಿವೃದ್ಧಿ ಮತ್ತು ಒಳ್ಳೆಯ ಆಡಳಿತ ನೀಡಿದೆ. ಕಳೆದು ಹೋಗಿದ್ದ ದೇಶದ ಘನತೆ ಮತ್ತು ಗೌರವವನ್ನು ಪುನರ್ ಸ್ಥಾಪಿಸಲಾಗಿದೆ ಎಂದು ಹೇಳಿದರು.
ದೇಶದಲ್ಲಿ ಮಾದರಿ ಆಡಳಿತ ನೀಡಿದ ರೀತಿಯಲ್ಲೇ ರಾಜ್ಯದಲ್ಲೂ ಬಿಜೆಪಿ ಉತ್ತಮ ಆಡಳಿತ ನೀಡಲಿದೆ. ಸಂವಾದದಲ್ಲಿ ವ್ಯಕ್ತವಾಗುವ ಅಭಿಪ್ರಾಯ ಹಾಗೂ ಸಲಹೆಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸುವುದರ ಜತೆಗೆ ಅವುಗಳ ಅನುಷ್ಠಾನಕ್ಕೂ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಶಾಸಕ ಅಶ್ವತ್ಥನಾರಾಯಣ ಮಾತನಾಡಿ, ಉತ್ಪಾದಕ ವಲಯ ಹಲವು ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗುವುದು. ರಾಜ್ಯವನ್ನು ಉತ್ಪಾದಕ ವಲಯದ ಮುಂಚೂಣಿ ರಾಜ್ಯವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಇಷ್ಟೆಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ ರಾಷ್ಟ್ರ ಮೊದಲು ಅನ್ನುವುದಕ್ಕಿಂತ ಮತ ಮೊದಲು ಎಂದು ಅನುಸರಿಸಿಕೊಂಡು ಬರುತ್ತಿರುವ ಕ್ರಮ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಫ್ಕೆಸಿಸಿಐ ಅಧ್ಯಕ್ಷ ರವಿಕುಮಾರ್, ಕಾಸಿಯಾ ಅಧ್ಯಕ್ಷ ಹನುಮಂತೇಗೌಡ, ಬಿಜೆಪಿ ಸಣ್ಣ ಮತ್ತು ಮಧ್ಯಮ ಉದ್ಯೋಗ ಪ್ರಕೋಷ್ಠದ ಸಂಚಾಲಕ ರಾಜೇಂದ್ರಕುಮಾರ್, ಸಹ ಸಂಚಾಲಕರಾದ ಭದರೀನಾಥ್ ಕಾಮತ್, ಜಯಂತ್, ಉಮೇಶ್ ಶರ್ಮ, ಶಶಿಧರ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.