ಬೆಂಗಳೂರು, ಏ.1-ಡಿಜಿಟಲ್ ಗೌರ್ನೆನ್ಸ್ ಒಂದು ಉತ್ತಮ ವ್ಯವಸ್ಥೆಯಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಇಂದಿಲ್ಲಿ ತಿಳಿಸಿದರು.
ರಾಜ್ಯ ಬಿಜೆಪಿ ವತಿಯಿಂದ ಆಯೋಜಿಸಿದ್ದ ಬೆಂಗಳೂರು ಐಟಿ ಗ್ಲೋಬಲ್ ಹಬ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ರಾಜೀವ್ಗಾಂಧಿ ಅವರು ನಾನು ಸರ್ಕಾರದಿಂದ ಒಂದು ರೂಪಾಯಿ ಕಳುಹಿಸಿದರೆ ಶ್ರೀಸಾಮಾನ್ಯನಿಗೆ ಕೇವಲ 15 ಪೈಸೆ ಸಿಗುತ್ತದೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಆದರೆ, ನಾವು ಹೇಳುತ್ತಿದ್ದೇವೆ. ಒಂದು ಸಾವಿರ ರೂ.ಗಳನ್ನು ನಮ್ಮ ಸರ್ಕಾರ ನೀಡಿದರೆ ಪೂರ್ತಿ ಒಂದು ಸಾವಿರ ರೂ. ನಿಮ್ಮ ಖಾತೆಗೆ ತಲುಪುತ್ತದೆ. ಇದು ಡಿಜಿಟಲ್ ಗೌರ್ನೆನ್ಸ್ ವ್ಯವಸ್ಥೆ ಎಂದು ವಿವರಿಸಿದರು.
30 ಟೆಲಿವಿಜನ್ ಕಂಪೆನಿಗಳು ಮೂರೂವರೆ ವರ್ಷಗಳಲ್ಲಿ ಆರಂಭವಾಗಿವೆ. ಭಾರತದ ಆರ್ಥಿಕ ಪ್ರಗತಿ ಮತ್ತಷ್ಟು ಏರುಮುಖವಾಗಿ ಸಾಗಿ ಒಂದು ಟ್ರಿಲಿಯನ್ ಡಾಲರ್ ತಲುಪಬೇಕು ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಮೊಬೈಲ್ ತಯಾರಿಸುವ ಕೇವಲ ಎರಡು ಕಂಪೆನಿಗಳಿದ್ದವು. ಈಗ 120 ಕಂಪೆನಿಗಳಾಗಿವೆ. ಅಲ್ಲದೆ ಭಾರತ ದೊಡ್ಡ ಡಿಜಿಟಲ್ ಮಾರ್ಕೆಟ್ ಆಗಿ ಪರಿವರ್ತನೆಯಾಗಿದ್ದು, 39.60 ಲಕ್ಷ ಜನ ನೇರವಾಗಿ ಐಟಿ ಕ್ಷೇತ್ರದಲ್ಲಿ ಉದ್ಯೋಗಿಗಳಾಗಿದ್ದಾರೆ. ಸ್ಟಾರ್ಟ್ಅಪ್ ಕಂಪೆನಿಗಳಿಂದಾಗಿ ಇಂದು ನಾವು ಕೆಲಸ ಕೇಳುವವರಾಗಿ ಉಳಿಯುವುದಿಲ್ಲ. ಕೆಲಸ ನೀಡುವವರಾಗುತ್ತೇವೆ ಎಂದು ಹೇಳಿದರು.
ಹಿಂದಿನ ಮನಮೋಹನ್ಸಿಂಗ್ ಸರ್ಕಾರ 358ಕಿಮೀ ಆಪ್ಟಿಕಲ್ ಫೈಬರ್ ಅಳವಡಿಸಿತ್ತು. ಆದರೆ, ಮೋದಿ ಸರ್ಕಾರ 3 ಲಕ್ಷಕ್ಕೂ ಹೆಚ್ಚು ಕಿಮೀನಷ್ಟು ಆಪ್ಟಿಕಲ್ ಫೈಬರ್ ಅಳವಡಿಸಿದೆ ಎಂದರು.
ಮೋಟಾರ್ ವೆಹಿಕಲ್ ಲೈಸೆನ್ಸ್ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಬೇಕು ಎಂಬ ವಿಚಾರವಾಗಿ ನಾನು ಗಡ್ಕರಿ ಅವರೊಂದಿಗೆ ಚರ್ಚಿಸಿದ್ದೆ. ಏಕೆಂದರೆ, ಮೋಟಾರ್ ಬೈಕ್ ಓಡಿಸುವವರು ಅಪಘಾತ ಮಾಡಿ ತಪ್ಪಿಸಿಕೊಂಡು ಮತ್ತೊಂದು ರಾಜ್ಯಕ್ಕೆ ಹೋಗಿ ಲೈಸೆನ್ಸ್ ಪಡೆಯಲು ಅವಕಾಶವಿರಬಾರದು. ಈ ನಿಟ್ಟಿನಲ್ಲಿ ಲೈಸೆನ್ಸ್ಅನ್ನು ಆಧಾರ್ಗೆ ಲಿಂಕ್ ಮಾಡುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.
ನರೇಂದ್ರ ಮೋದಿ ಅವರು ಅಭ್ಯರ್ಥಿಯಾಗಿದ್ದಾಗ ಐಟಿ+ಐಟಿ=ಐಟಿ ಎಂದು ಹೇಳಿದ್ದರು. ಅಂದರೆ, ಇನ್ಫಾರ್ಮೇಷನ್ ಟೆಕ್ನಾಲಜಿ+ಇಂಡಿಯನ್ ಟ್ಯಾಲೆಂಟ್= ಇಂಡಿಯಾ ಟುಮಾರೋ ಎಂಬ ಪರಿಕಲ್ಪನೆ ಅವರದ್ದಾಗಿತ್ತು. ಅಂತಹ ದೂರದೃಷ್ಟಿಯ ದೊಡ್ಡ ಹೊಣೆಯನ್ನು ಮೋದಿ ಅವರು ನನ್ನ ಹೆಗಲಿಗೆ ಹಾಕಿದ್ದಾರೆ ಎಂದು ಹೇಳಿದರು.