ಕಟಕ್, ಏ.1- ಮನೆಯಲ್ಲಿ ಮಲಗಿದ್ದ 6 ದಿನದ ಮಗುವನ್ನು ಕೋತಿಯೊಂದು ಹನುಮಜಯಂತಿಯಂದೇ ಹೊತ್ತುಕೊಂಡು ಹೋಗಿರುವ ವಿಚಿತ್ರ ಘಟನೆ ಜಿಲ್ಲೆಯ ತಲಾಬಸ್ತಾ ಗ್ರಾಮದ ಬಂಕಿ ಬ್ಲಾಕ್ನಲ್ಲಿ ನಡೆದಿದೆ. ತಲಬಾಸ್ತಾ ಗ್ರಾಮದ ರಮಾಕೃಷ್ಣಾನಾಯಕ್ ಎಂಬ ಬಾಣಂತಿ ತನ್ನ ಪುಟ್ಟ ಕಂದಮ್ಮನೊಂದಿಗೆ ನಿದ್ರಿಸುತ್ತಿದ್ದಾಗ ಏಕಾಏಕಿ ಮನೆಗೆ ನುಗ್ಗಿದ ವಾನರ ಮಗುವನ್ನು ಎತ್ತಿಕೊಂಡು ಓಡಿದೆ. ಘಟನೆಯಿಂದ ದಿಗ್ಬ್ರಾಮೆಗೊಂಡ ರಮಾ ಕೋತಿಯನ್ನು ಹಿಮ್ಮೆಟ್ಟಿಸಿಕೊಂಡು ಓಡಿದ್ದಾಳೆ. ಆಕೆಯ ಆಕ್ರಂದನವನ್ನು ಕೇಳಿ ಸಹಾಯಕ್ಕೆ ಸ್ಥಳೀಯ ನಿವಾಸಿಗಳು ಬಂದರೂ ಕೂಡ ಮಂಗ ಮಗುವನ್ನು ಎತ್ತಿಕೊಂಡು ಅರಣ್ಯದೊಳಕ್ಕೆ ನುಗ್ಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮಗುವಿನ ಪತ್ತೆಗಾಗಿ ತೀವ್ರ ಕಾರ್ಯಾಚರಣೆ ಕೈಗೊಂಡರೂ ಕೂಡ ಮಂಗ ಅಥವಾ ಮಗುವಿನ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಮಗುವನ್ನು ಕಳೆದುಕೊಂಡಿರುವ ತಾಯಿ ರಮಾಕೃಷ್ಣಾನಾಯಕ್ರ ಆಕ್ರಂದನ ಮುಗಿಲು ಮುಟ್ಟಿದ್ದರೆ, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.