ಬೆಂಗಳೂರು, ಏ.1-ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ಶಂಕರ ಮಠ ವಾರ್ಡ್ನಲ್ಲಿರುವ ಕುರುಬರಹಳ್ಳಿ ಕೆಂಪೇಗೌಡ ಆಟದ ಮೈದಾನದಲ್ಲಿ ಒಳಾಂಗಣ ಕ್ರೀಡಾ ಸಂಕೀರ್ಣ ನಿರ್ಮಿಸುವುದನ್ನು ವಿರೋಧಿಸಿ ಕೆಂಪೇಗೌಡ ಆಟದ ಮೈದಾನ ಸಂರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕುರುಬರಹಳ್ಳಿ ಎಸ್.ವಿ.ಕೆ ಲೇಔಟ್ ಲಕ್ಷ್ಮಿನಗರದಲ್ಲಿರುವ ಕೆಂಪೇಗೌಡ ಆಟದ ಮೈದಾನದಲ್ಲಿ ಸ್ಥಳೀಯರು, ಸಂಘ ಸಂಸ್ಥೆಗಳು ಸುಮಾರು ವರ್ಷದಿಂದ ಮೈದಾನವನ್ನು ಒತ್ತುವರಿದಾರರಿಂದ ಉಳಿಸಿಕೊಂಡು ಬಂದಿದ್ದು, ಈ ಒಂದೇ ಮೈದಾನ ಸುತ್ತಮುತ್ತಲಿನ ಪ್ರದೇಶಕ್ಕೆ ಏಕೈಕ ಆಟದ ಮೈದಾನವಾಗಿರುತ್ತದೆ.
ಇಲ್ಲೂ ಕೂಡ ಸ್ಥಳೀಯ ಪಾಲಿಕೆ ಸದಸ್ಯರು ಒಳಾಂಗಣ ಕ್ರೀಡಾಂಗಣ ಸಂಕೀರ್ಣ ನಿರ್ಮಿಸಲು ಮುಂದಾಗಿ ಸಾರ್ವಜನಿಕರಿಗೆ ಆಟದ ಮೈದಾನವಿಲ್ಲದಂತೆ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ವೇದಿಕೆ ಕಾರ್ಯಕರ್ತರು ಆರೋಪಿಸಿ ಪ್ರತಿಭಟನೆ ನಡೆಸಿದರು.
ಈಗಾಗಲೇ ಡಾ.ರಾಜ್ಕುಮಾರ್ ಒಳಾಂಗಣ ಕ್ರೀಡಾಂಗಣ ಸೇರಿದಂತೆ ಹಲವಾರು ಒಳಾಂಗಣ ಕ್ರೀಡಾಂಗಣಗಳು ಈ ಭಾಗದಲ್ಲಿವೆ.
ಸಾರ್ವಜನಿಕರಿಗೆ ಕ್ರೀಡಾ ಮೈದಾನ ಇದೊಂದೇ ಇದೆ. ಶಾಲಾ ಮಕ್ಕಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನೆರವೇರಿಸಲು ಇದೊಂದೇ ಮೈದಾನ ಇರುವುದರಿಂದ ಈ ಆಟದ ಮೈದಾನದಲ್ಲಿ ಯಾವುದೇ ಕಾಮಗಾರಿ ಮಾಡಬಾರದು. ಆಟದ ಮೈದಾನವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕು ಎಂದು ಚಾಲುಕ್ಯ ಡಾ.ರಾಜ್ಕುಮಾರ್ ಟ್ರಸ್ಟ್ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಯ ಮುಖಂಡರು ಆಗ್ರಹಿಸಿ ಪ್ರತಿಭಟನೆ ನಡೆಸಿ ಕಾಮಗಾರಿ ಪ್ರಾರಂಭಿಸುವುದಕ್ಕೆ ತಡೆಯೊಡ್ಡಿದ್ದಾರೆ. ಇಷ್ಟಕ್ಕೂ ಮೀರಿ ಕಾಮಗಾರಿ ಪ್ರಾರಂಭಿಸಿದರೆ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ನಡೆದ ಪ್ರತಿಭಟನೆಯಲ್ಲಿ ಕೆಂಪೇಗೌಡ ಆಟದ ಮೈದಾನ ಸಂರಕ್ಷಣಾ ವೇದಿಕೆ, ಚಾಲುಕ್ಯ ಡಾ.ರಾಜ್ಕುಮಾರ್ ಪ್ರತಿಮೆ ಪ್ರತಿಷ್ಠಾನ ಟ್ರಸ್ಟ್, ವಿವಿಧ ಕನ್ನಡ ಪರ ಸಂಘಟನೆಗಳು ಸ್ಥಳೀಯ ಮುಖಂಡರು ಭಾಗವಹಿಸಿ ಬಿಬಿಎಂಪಿ ಆಯುಕ್ತರಿಗೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಟ್ರಸ್ಟ್ ಗೌರವ ಅಧ್ಯಕ್ಷರಾದ ಎಂ.ನಾಗರಾಜ್, ರಮೇಶ್, ಶಿವಾನಂದ್, ನರಸಿಂಹ, ರಾಘವೇಂದ್ರಶೆಟ್ಟಿ, ಕದಂಬ, ಚಲುವ, ಲಕ್ಷ್ಮಿನಾರಾಯಣ್, ಶ್ರೀನಿವಾಸ್, ನಿಸರ್ಗ ಜಗದೀಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.