ಬೆಂಗಳೂರು,ಏ.1-ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೊಸ ಹೊಸ ಪ್ರಯೋಗಗಳ ಮೂಲಕವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮುಂದಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಕಾರ್ಯ ಶೈಲಿ ಆಕಾಂಕ್ಷಿಗಳಿಗೆ ನುಂಗಲಾರದ ತುತ್ತಾಗಿದೆ.
ಹಾಲಿ ಶಾಸಕರು ಸೇರಿದಂತೆ ಸಮೀಕ್ಷಾ ವರದಿ , ಜಿಲ್ಲಾ ಸಮಿತಿ ಮತ್ತು ಮಂಡಲ ಮುಖಂಡರ ಸೂಚನೆ ಮೇರೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮುಂದಾಗಿರುವುದು ಅಭ್ಯರ್ಥಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಈವರೆಗೂ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದವರಿಗೆ ಅಮಿತ್ ಷಾ ದಿನದಿಂದ ದಿನಕ್ಕೆ ಕೊಡತ್ತಿರುವ ಕೆಲಸಗಳು ಆಕಾಂಕ್ಷಿಗಳಲ್ಲಿ ನಡುಕ ಹುಟ್ಟಿಸಿದೆ.
ಕೊನೆ ಕ್ಷಣದವರೆಗೆ ಯಾರೊಬ್ಬರು ನಾನೇ ಅಭ್ಯರ್ಥಿ ಎಂದು ಗಟ್ಟಿಯಾಗಿ ಹೇಳಿಕೊಳ್ಳುವ ವಿಶ್ವಾಸವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೊರತುಪಡಿಸಿದರೆ ಇನ್ನು ಉಳಿದ 223 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ ಮತ್ತೆ ಇನ್ಯಾರಿಗೆ ಕೈ ತಪ್ಪಲಿದೆ ಎಂಬ ಭೀತಿ ಆವರಿಸಿದೆ.
ನೀವು ಕ್ಷೇತ್ರದಲ್ಲೇ ಇದ್ದು ಜನರ ಬಳಿ ಹೋಗಬೇಕು. ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡುವಂತೆ ಸೂಚಿಸಿರುವುದು ಮುಷ್ಟಿ ಅಕ್ಕಿ ಸಂಗ್ರಹಣೆ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ಅಭ್ಯರ್ಥಿಗಳನ್ನು ದಂಡನೆ ಮಾಡುತ್ತಿದ್ದಾರೆ.
ಈ ಹಿಂದೆ ನಡೆದ ಚುನಾವಣೆಯಲ್ಲಿ ಯಾರೂ ಯಾವಾಗ ಬೇಕಾದರೂ ಬೇರೆ ಪಕ್ಷದಿಂದಲೂ ಬಂದು ಕೊನೆ ಕ್ಷಣದಲ್ಲಿ ಬಿ ಫಾರಂ ತೆಗೆದುಕೊಳ್ಳಬಹುದಿತ್ತು. ಆದರೆ ಅಮಿತ್ ಷಾ ಅವರು ರಾಷ್ಟ್ರೀಯ ಅಧ್ಯಕ್ಷರಾದ ಮೇಲೆ ಯಾರೊಬ್ಬರಿಗೂ ಸುಲಭವಾಗಿ ಟಿಕೆಟ್ ನೀಡುವುದಿಲ್ಲ. ಅಲ್ಲದೆ ಬೇರೊಬ್ಬರ ಒತ್ತಡಕ್ಕೂ ಕ್ಯಾರೆ ಎನ್ನುವುದಿಲ್ಲ.
ಅವರು ನೀಡುತ್ತಿರುವ ಕೆಲಸಗಳು ನಮ್ಮನ್ನು ಹೈರಾಣಾಗಿಸಿದೆ ಎಂದು ಹೆಸರು ಹೇಳಲಿಚ್ಚಿಸದ ಪ್ರಮುಖರು ಅಳಲು ತೋಡಿಕೊಂಡಿದ್ದಾರೆ.
ಟಿಕೆಟ್ ಖಾತ್ರಿ ಇಲ್ಲ:
ನಾವು ಏನೇ ಸರ್ಕಸ್ ಮಾಡಿದರೂ ಈವರೆಗೂ ನಮಗೆ ಟಿಕೆಟ್ ಸಿಗುತ್ತದೆ ಎಂಬ ಖಾತರಿಯೂ ಇಲ್ಲ. ಸಮೀಕ್ಷೆ ಏನು ಹೇಳುತ್ತದೆಯೋ ಅವರಿಗೆ ಟಿಕೆಟ್ ಎಂದು ವರಿಷ್ಠರು ಹೇಳುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ನಾವು ಕೈ ಕೈ ಹಿಸುಕಿಕೊಳ್ಳುವಂತಾಗಿದೆ ಎಂದ ಹೇಳಿದ್ದಾರೆ.
ಈ ಹಿಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಇಲ್ಲವೆ ಆರ್ಎಸ್ಎಸ್ ನಾಯಕರ ಸ್ನೇಹ ಬಳಸಿಕೊಂಡು ಟಿಕೆಟ್ ಪಡೆಯುತ್ತಿದ್ದವು. ಅಮಿತ್ ಷಾ ಪಕ್ಷದಲ್ಲಿ ಹಿಡಿತ ಸಾಧಿಸಿದ ಮೇಲೆ ಎಲ್ಲವೂ ತಲೆಕೆಳಗಾಗಿವೆ.
ಹಿಂದೆ ಹಣವುಳ್ಳರು, ಉದ್ಯಮಿಗಳು ಟಿಕೆಟ್ ತೆಗೆದುಕೊಳ್ಳಬಹುದಿತ್ತು. ಈಗ ಎಲ್ಲವೂ ಮಂಗಮಾಯವಾಗಿ ಕ್ಷೇತ್ರದಲ್ಲಿ ಕೆಳಹಂತದ ಕಾರ್ಯಕರ್ತರ ಜೊತೆ ಗುರುತಿಸಿಕೊಂಡವರಿಗೆ ಮಾತ್ರ ಟಿಕೆಟ್ ಎಂದು ಹೇಳುತ್ತಿದ್ದಾರೆ.
ಹೀಗಾಗಿ ಟಿಕೆಟ್ ಸಿಗುತ್ತದೆಯೋ ಇಲ್ಲವೋ ಎಂಬುದು ಗ್ಯಾರಂಟಿ ಇಲ್ಲ ಎಂದು ಅನೇಕರು ಮನಸ್ಸಿನಲ್ಲೇ ನೋವು ಹೊರ ಹಾಕುತ್ತಿದ್ದಾರೆ.
ಸರಣಿ ಸಭೆ:
ಸದ್ಯ ಕರ್ನಾಟಕದ ಪ್ರವಾಸದಲ್ಲಿರುವ ಅಮಿತ್ ಷಾ ಮುಂಬೈ ಕರ್ನಾಟಕ ಪ್ರವಾಸದ ನಂತರ ಇದೇ 7ರಿಂದ ಪಕ್ಷದ ಕಚೇರಿಯಲ್ಲಿ ಸರಣಿ ಸಭೆಗಳನ್ನು ನಡೆಸಲು ಮುಂದಾಗಿದ್ದಾರೆ.
ಮೊದಲಿಗೆ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಕಳೆದ ಚುನಾವಣೆಯಲ್ಲಿ ಪರಾಭವಗೊಂಡವರು, ಜಿಲ್ಲಾಧ್ಯಕ್ಷರು, ಮಂಡಲ ಪ್ರಮುಖರ ಜೊತೆ ಮಾತುಕತೆ ನಡೆಸಿದ್ದಾರೆ.
ಎಲ್ಲರ ಅಭಿಪ್ರಾಯ ಪಡೆದ ನಂತರ ದೆಹಲಿಗೆ ಪಟ್ಟಿ ರವಾನೆಯಾಗಲಿದೆ. ತದನಂತರ ಪಕ್ಷದ ಚುನಾವಣಾ ಸಮಿತಿ ಪರಿಶೀಲನೆ ನಡೆಸಿ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಮೂಲಗಳ ಪ್ರಕಾರ ಏ.10ರ ನಂತರವೇ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದ್ದು, ಪಕ್ಷದಲ್ಲಿ ಬಂಡಾಯ ಏಳದಂತೆ ಎಚ್ಚರಿಕೆ ಹೆಜ್ಜೆ ಇಟ್ಟಿದೆ.