ಮೈಸೂರು,ಮಾ.31- ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಪಕ್ಷ ಸೇರ್ಪಡೆ ಕುರಿತಂತೆ ನಾನು ಏನನ್ನು ಹೇಳುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.
ಖುದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಈ ಹೇಳಿಕೆ ನೀಡಿರುವುದರಿಂದ ಪುನಃ ಮಾತೃ ಪಕ್ಷಕ್ಕೆ ಸೇರ್ಪಡೆಯಾಗಲು ಹವಣಿಸುತ್ತಿದ್ದ ಜನಾರ್ಧನ ರೆಡ್ಡಿ ಆಸೆಗೆ ತಣ್ಣೀರು ಎರಚಿದಂತಾಗಿದೆ.
ಪಕ್ಷ ಸಂಘಟನೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ ಅಮಿತ್ ಷಾ ಇಂದು ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಈ ವೇಳೆ ಮಾಧ್ಯಮದವರು ಜನಾರ್ಧನ ರೆಡ್ಡಿ ಪಕ್ಷಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಅವರು ಬರುವುದಾದರೆ ನಿಮ್ಮ ಪಕ್ಷ ಸೇರ್ಪಡೆ ಮಾಡಿಕೊಳ್ಳುತ್ತದೆಯೇ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಷಾ, ಜನಾರ್ಧನ ರೆಡ್ಡಿಗೂ, ಪಕ್ಷಕ್ಕೂ ಸಂಬಂಧವೇ ಇಲ್ಲ. ಪಕ್ಷ ಸೇರ್ಪಡೆ ಬಗ್ಗೆ ನಾನು ಗೊಂದಲದ ಹೇಳಿಕೆ ನೀಡಿ ಇರಿಸು ಮುರಿಸು ಉಂಟು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಎಟಿಎಂ:
ಭ್ರಷ್ಟಾಚಾರದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಎಟಿಎಂ ಇದ್ದಂತೆ ಎಂದು ವಾಗ್ದಾಳಿ ಮಾಡಿದ ಅಮಿತ್ ಷಾ, ಕೇಂದ್ರದಿಂದ ಕರ್ನಾಟಕದ ಅಭಿವೃದ್ದಿಗಾಗಿ ನೀಡಲಾಗಿರುವ ಕೋಟ್ಯಂತರ ಹಣವನ್ನು ರಾಜ್ಯದ ಜನತೆಯ ಅಭಿವೃದ್ದಿಗೆ ಬಳಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ರೈತರಿಗೂ ಸಹ ಸಮರ್ಪಕವಾದ ಸೌಲಭ್ಯಗಳನ್ನು ನೀಡುವಲ್ಲಿ ಈ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದಕ್ಕೆ ಸಾವಿರಾರು ರೈತರ ಆತ್ಮಹತ್ಯೆ ಪ್ರಕರಣಗಳೇ ಸಾಕ್ಷಿ ಎಂದರು.
ರೈತರಿಗೆ ಸರಿಯಾದ ಸೌಲಭ್ಯಗಳನ್ನು ನೀಡಿದ್ದರೆ ಇಷ್ಟೊಂದು ಮಂದಿ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದು ಪ್ರಶ್ನಿಸಿದರು.
ರಾಜ್ಯದ ಬಡ ಜನರಿಗಾಗಿ ಅತ್ಯುತ್ತಮವಾದ ಆರೋಗ್ಯ ಸೇವೆ ನೀಡುವಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ಷೇಪಿಸಿದರು.
ಕೇಂದ್ರ ಸರ್ಕಾರ ಬಡ ಜನತೆಯ ಆರೋಗ್ಯಕ್ಕಾಗಿ ಉತ್ತಮ ಯೋಜನೆಗಳನ್ನು ನೀಡಿದ್ದರೂ ರಾಜ್ಯ ಸರ್ಕಾರ ಅದನ್ನು ಬಳಸಿಕೊಳ್ಳುವಲ್ಲಿ ಎಡವಿದೆ ಎಂದರು.
ಈ ಸರ್ಕಾರ ಅಗತ್ಯವಾಗಿ ಬೇಕಾಗಿರುವ ವಿದ್ಯುತ್ ನೀಡತ್ತಿಲ್ಲ , ಐಟಿ-ಬಿಟಿಗಳಿಂದ ರಾಜ್ಯ ಸರ್ಕಾರಕ್ಕೆ ಆದಾಯ ಹೆಚ್ಚಾಗಿ ಬರುತ್ತಿದೆ. ಆದರೆ ಇಂತಹ ಸಂಸ್ಥೆಗಳಿಗೆ ದಿನದ 24 ಗಂಟೆ ವಿದ್ಯುತ್ ಪೂರೈಸಲು ಇವರಿಂದ ಸಾಧ್ಯವಾಗಿಲ್ಲ. ಇವರು ವಿಫಲರಾಗಿರುವುದಕ್ಕೆ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಬಾರಿ ಈ ಪಕ್ಷ ಗೆಲ್ಲುವುದಿಲ್ಲ. ಇನ್ನು ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದ್ದು, ಇವರಿಗೆ ತಾವೇ ಸ್ವತಃ ಸರ್ಕಾರ ರಚಿಸಲು ಸಾಧ್ಯವಿಲ್ಲ. ಹಾಗಾಗಿ ಕರ್ನಾಟಕದಲ್ಲಿ ಬಿಜೆಪಿ ಪರಿವರ್ತನೆ ತರುವುದಲ್ಲದೆ ಅಭಿವೃದ್ಧಿಪಡಿಸಲಿದೆ. ರಾಜ್ಯದ ಜನತೆ ನಮ್ಮ ಪಕ್ಷಕ್ಕೆ ಹೆಚ್ಚಿನ ಶಕ್ತಿ ನೀಡಬೇಕೆಂದು ಮನವಿ ಮಾಡಿದರು.
ಬಿಜೆಪಿಗೆ ಹೆಚ್ಚು ಶಕ್ತಿ ನೀಡಿದ್ದೇ ಆದರೆ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರ ಹಿಡಿದು ಅಭಿವೃದ್ಧಿ ಪರ ಸರ್ಕಾರ ನೀಡುತ್ತೇವೆ ಎಂದು ಹೇಳಿದರು.
ಬಿ.ಎಸ್.ಯಡಿಯೂರಪ್ಪನವರನ್ನು ಅಧಿಕಾರಕ್ಕೆ ತರಬಾರದೆಂಬ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತರು ಮತ್ತು ವೀರಶೈವರ ನಡುವೆ ಭೇದ ಉಂಟು ಮಾಡಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮವಾಗಿ ಹುಟ್ಟು ಹಾಕಲು ಹೊರಟಿದ್ದಾರೆ ಎಂದರು.
ಅಧಿಕಾರಕ್ಕೆ ಬಂದಾಗಲೇ ಇದನ್ನು ಮಾಡುಬಹುದಿತ್ತಲ್ಲ? ಆಗ ಸುಮ್ಮನಿದ್ದು , ಈಗ ಚುನಾವಣೆ ಸಮೀಪಿಸಿದಾಗ ಜನಾಂಗ ಒಡೆಯಲು ಹೊರಟಿದ್ದಾರೆ ಎಂದು ದೂರಿದರು.
ತಾವು ಹಿಂದುಳಿದವರ ಪರ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಒಬಿಸಿ ಬಿಲ್ಲನ್ನು ಇವರ ಪಕ್ಷದವರೇ ವಿರೋಧಿಸುತ್ತಿದ್ದಾರೆ. ಏಕೆ ವಿರೋಧಿಸುತ್ತೀರಾ ಎಂದು ತಮ್ಮ ವರಿಷ್ಠರನ್ನು ಮುಖ್ಯಮಂತ್ರಿಗಳು ಏಕೆ ಪ್ರಶ್ನಿಸಿಲ್ಲ ಎಂದರು.
ಬಿಜೆಪಿಯಲ್ಲೇ ಹಲವಾರು ಮಂದಿ ಗಣಿ ಹಗರಣ, ಭೂಮಾಫಿಯಾದಲ್ಲಿ ಸಿಲುಕಿದವರು ಇದ್ದಾರೆ. ಅವರಿಗೂ ಟಿಕೆಟ್ ಕೊಡುತ್ತಿದ್ದೀರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅಮಿತ್ ಷಾ, ಇದುವರೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಭ್ರಷ್ಟಾಚಾರ ಇರುವವರನ್ನು ನಮ್ಮ ಚುನಾವಣಾ ಸಮಿತಿ ಪರಿಶೀಲಿಸಿ ಸೂಕ್ತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ್, ಮುಖಂಡ ಆರ್.ಅಶೋಕ್, ಸಿ.ಟಿ.ರವಿ, ಉಸ್ತುವಾರಿ ಮುರುಳೀಧರ್ ರಾವ್ ಉಪಸ್ಥಿತರಿದ್ದರು.