ನವದೆಹಲಿ, ಮಾ.31-ಹಿಮಾಲಯ ರಾಷ್ಟ್ರ ನೇಪಾಳದಿಂದ ಭಾರತಕ್ಕೆ ಬಾಲಕಿಯರು ಮತ್ತು ಯುವತಿಯರನ್ನು ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಈ ಅಕ್ರಮ ಚಟುವಟಿಕೆಗಳು ಶೇ.500ರಷ್ಟು ಹೆಚ್ಚಾಗಿದೆ ಎಂಬ ಆತಂಕಕಾರಿ ಸಂಗತಿಯನ್ನು ಅಧ್ಯಯನವೊಂದು ಬಹಿರಂಗಗೊಳಿಸಿದೆ. ಗಡಿ ಪಹರೆಗೆ ನಿಯೋಜಿತವಾಗಿರುವ ಸೇನಾಪಡೆಯಾದ ಸಶಸ್ತ್ರ ಸೀಮಾ ಬಲ್ (ಎಸ್ಎಸ್ಬಿ) ಇಂಡೋ-ನೇಪಾಳ್ ಗಡಿಯಲ್ಲಿ ಮಾನವ ಕಳ್ಳಸಾಗಣೆ ಕುರಿತು ನಡೆಸಿರುವ ಅಧ್ಯಯನದಲ್ಲಿ ಈ ಮಾಹಿತಿ ಲಭ್ಯವಾಗಿದೆ.
ನೇಪಾಳದ ಗ್ರಾಮಗಳು ಮತ್ತು ತೆರಾಯ್ ಪ್ರಾಂತ್ಯದ ಬಾಲಕಿಯರು ಮತ್ತು ಯುವತಿಯರನ್ನು ದೆಹಲಿ, ಮುಂಬೈ, ಕೊಲ್ಕತಾ ಹಾಗೂ ಇತರ ನಗರಗಳಲ್ಲಿನ ವೇಶ್ಯಾ ಗೃಹಗಳಿಗೆ 50,000 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದ್ದು, ಇದೊಂದು ವ್ಯವಸ್ಥಿತ ದಂಧೆಯಾಗಿ ಪರಿಣಮಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
2013ರಿಂದ ಈ ಕಳ್ಳಸಾಗಣೆ ಪ್ರಕರಣವು ಶೇ.500ರಷ್ಟು ಹೆಚ್ಚಾಗಿದೆ. ನೇಪಾಳದ 75 ಜಿಲ್ಲೆಗಳಲ್ಲಿನ 26 ಪ್ರಾಂತ್ಯಗಳ ಬಾಲಕಿಯರು ಮತ್ತು ಯುವತಿಯರನ್ನು ಈ ದಂಧೆಗೆ ಬಲವಂತವಾಗಿ ದೂಡಲಾಗುತ್ತಿದೆ ಎಂಬ ಸಂಗತಿಯನ್ನು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.
ಕುಗ್ರಾಮಗಳು, ಹಳ್ಳಿಗಳು ಮತ್ತು ಹಿಂದುಳಿದ ಪ್ರಾಂತ್ಯಗಳ ನೇಪಾಳಿ ಹೆಣ್ಣುಮಕ್ಕಳನ್ನು ಭಾರತದಲ್ಲಿ ಉದ್ಯೋಗದ ಆಮಿಷವೊಡ್ಡಿ ಮಾನವ ಕಳ್ಳಸಾಗಣೆ ಮೂಲಕ ಕರೆತರಲಾಗುತ್ತಿದೆ. ನಂತರ ಅವರನ್ನು ವೇಶ್ಯಾವಾಟಿಕೆಗೆ ಅಥವಾ ಮನೆಗೆಲಸಕ್ಕೆ ಅಥವಾ ಇನ್ನಿತರ ಶೋಷಣೆಯ ಶ್ರಮದಾಯಿಕ ನೌಕರಿಗೆ ದೂಡಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಅವರ ಅಂಗಗಳನ್ನು ಪಡೆದು ಉಳ್ಳವರಿಗೆ ಅಂಗಾಂಗ ಕಸಿಗಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನೂ ಅಧ್ಯಯನದಲ್ಲಿ ತಿಳಿಸಲಾಗಿದೆ. ಇಂಡೋ-ನೇಪಾಳ ಗಡಿಯಲ್ಲಿ 2013ರಲ್ಲಿ 108 ಯುವತಿಯರನ್ನು ಕಳ್ಳಸಾಗಣೆದಾರರಿಂದ ರಕ್ಷಿಸಲಾಗಿದ್ದರೆ, 2017ರಲ್ಲಿ ಸಂತ್ರಸ್ತರ ಸಂಖ್ಯೆ 607 ಎಂದು ವರದಿ ತಿಳಿಸಿದೆ.