ಮೈಸೂರು, ಮಾ.31-ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಗರಿಗೆದರಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮತಬೇಟೆ ಮುಂದುವರೆದಿದೆ.
ಕ್ಷೇತ್ರದ ಮೇಗಳಾಪುರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳಿಗೆ ಜನ ಜೈಕಾರ ಹಾಕಿ ಸ್ವಾಗತಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಜನ ಸಂಭ್ರಮಿಸಿದರು.
ಜನರ ಅಭಿಮಾನಕ್ಕೆ ಸೋತ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರನ್ನು ಬಿಟ್ಟು ಜನರ ನಡುವೆ ರಸ್ತೆಯಲ್ಲೇ ನಡೆದುಕೊಂಡು ಹೋಗಿ ಪ್ರಚಾರ ನಡೆಸಿದರು.
ಹಾದಿಯುದ್ದಕ್ಕೂ ಜನ ಜಯಘೋಷಗಳನ್ನು ಕೂಗಿ ಮುಖ್ಯಮಂತ್ರಿ ಆಗಮನಕ್ಕೆ ಸಂಭ್ರಮ, ಸಡಗರ ವ್ಯಕ್ತಪಡಿಸಿದ ಜನತೆ ಮತ ಹಾಕುವ ಭರವಸೆ ನೀಡಿದರು.
ಮುಖ್ಯಮಂತ್ರಿಗಳ ಗ್ರಾಮ ಭೇಟಿ ಕಾರ್ಯಕ್ರಮ ಇಂದು ಚಾಮುಂಡೇಶ್ವರಿ ಕ್ಷೇತ್ರದ ಮೈದನಹಳ್ಳಿ,ಮೇಗಳಾಪುರ, ಮಲ್ಲೇಗೌಡನಕೊಪ್ಪಲು, ಉಂಡವಾಡಿ, ಚಿಕ್ಕನಹಳ್ಳಿ, ಆನಂದೂರು, ಕಲ್ಲೂರು ನಾಗನಹಳ್ಳಿ, ಕಲ್ಲೂರು, ಯಡಹಳ್ಳಿ, ರಾಮನಹಳ್ಳಿಗಳಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಪ್ರಚಾರ ನಡೆಸಿದರು.
ಮಧ್ಯಾಹ್ನದ ನಂತರ ಹೊಸಕೋಟೆ, ಯಾಚೇಗೌಡನಹಳ್ಳಿ, ದಡದ ಕಲ್ಲಹಳ್ಳಿ, ರಟ್ಟನಹಳ್ಳಿ, ಇಲವಾಲ ಸೇರಿದಂತೆ ವಿವಿಧೆಡೆ ಬಿರುಸಿನ ಪ್ರಚಾರ ಕೈಗೊಂಡರು.
ಸೆಲ್ಫೀಗೆ ಮುಗಿಬಿದ್ದ ಜನ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಚಾರದ ನಡುವೆಯೂ ಸೆಲ್ಫೀಗಾಗಿ ಜನ ಮುಗಿಬಿದ್ದ ಪ್ರಸಂಗ ನಡೆದಿದೆ. ಈಗಾಗಲೇ ಹಲವಾರು ಬಾರಿ ಕಾರ್ಯಕ್ರಮಗಳು ಸೇರಿದಂತೆ ಹಲವೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅಭಿಮಾನಿಗಳು, ಕಾರ್ಯಕರ್ತರು ಸೆಲ್ಫೀ ತೆಗೆಸಿಕೊಳ್ಳಲು ನಾಮುಂದು-ತಾಮುಂದು ಎಂದು ಮುಗಿಬಿದ್ದಿದ್ದರು.
ಇಂದೂ ಸಹ ಸಿಎಂ ಪ್ರಚಾರಕ್ಕಾಗಿ ಕಾರು ಬಿಟ್ಟು ರಸ್ತೆಯಲ್ಲೇ ನಡೆದು ಸಾಗಿದಾಗ ಎಲ್ಲೆಡೆ ಜನ ಸೆಲ್ಫೀಗಾಗಿ ಮನವಿ ಮಾಡುತ್ತಿದ್ದುದು ಕಂಡುಬಂತು.