ಬೆಂಗಳೂರು, ಮಾ.31-ರಾಮಕೃಷ್ಣನಗರದಲ್ಲಿರುವ ಮಕ್ಕಳ ಆಟದ ಮೈದಾನವನ್ನು ಉಳಿಸಿಕೊಡಬೇಕೆಂದು ಸಾರ್ವಜನಿಕರು ಮತ್ತು ಮಕ್ಕಳು ಏ.2 ರಂದು ಬಿಡಿಎ ಕಚೇರಿ ಮುಂದೆ ಪ್ರತಿಭಟನಾ ಧರಣಿಯನ್ನು ರಾಮಕೃಷ್ಣನಗರದ ಮಕ್ಕಳ ಆಟದ ಮೈದಾನ ರಕ್ಷಣಾ ಸಮಿತಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಗೊಳ್ಳಿರಾಯಣ್ಣ ಯುವಕರ ವೇದಿಕೆ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿನಿಲೇಔಟ್ನ ರಾಮಕೃಷ್ಣ ನಗರದಲ್ಲಿರುವ ಆಟದ ಮೈದಾನವನ್ನು ಸುಮಾರು 20 ವರ್ಷಗಳಿಂದ ಸುತ್ತಮುತ್ತಲಿನ ಸರ್ಕಾರಿ ಶಾಲೆ ಮಕ್ಕಳು ಹಾಗೂ ಸಾರ್ವಜನಿಕರು,ನಿವಾಸಿಗಳು ಉಪಯೋಗಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಬಿಡಿಎ ವತಿಯಿಂದ ಇದು ಸಿಎ ನಿವೇಶನಗಳೆಂದು ವಿಂಗಡಿಸಿ ಮೂರು ಸಂಘ ಸಂಸ್ಥೆಗಳಾದ ಚಿತ್ರದುರ್ಗದ ಲೋಕಸಭಾ ಸದಸ್ಯರಾದ ಬಿ.ಎನ್.ಚಂದ್ರಪ್ಪ ಅವರಿಗೆ ಸೇರಿದ ತುಂಗಭದ್ರಾ ವಿದ್ಯಾಸಂಸ್ಥೆ, ತುಮಕೂರಿನ ಹಾಲು ಉತ್ಪಾದಕ ಒಕ್ಕೂಟ, ಮಹಾಲಕ್ಷ್ಮಿಲೇಔಟ್ನ ಬ್ರಾಹ್ಮಣಸಭಾ ಇವರುಗಳಿಗೆ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಿದ್ದಾರೆ. ಆದ್ದರಿಂದ ಸ್ಥಳೀಯ ನಿವಾಸಿಗಳು, ಸಂಘಸಂಸ್ಥೆಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಕ್ರಮ ಹಂಚಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ರಾಮಕೃಷ್ಣ ನಗರದ ಮಕ್ಕಳ ಆಟದ ಮೈದಾನವು ಸುಮಾರು 20 ವರ್ಷಗಳಿಂದ ಬಳಕೆಯಾಗುತ್ತಿದ್ದು, ಅದನ್ನು ಉಳಿಸಿ ಅಭಿವೃದ್ಧಿಪಡಿಸಬೇಕು. ಸಿಎ ನಿವೇಶನಗಳಿಗಾಗಿ ಮೂರು ಸಂಸ್ಥೆಗಳಿಗೆ ಹಂಚಿಕೆಯಾಗಿರುವ 3 ನಿವೇಶನಗಳನ್ನು ಬಿಡಿಎ ಅಭಿವೃದ್ಧಿಪಡಿಸಬೇಕು ಮತ್ತು ಸಂಘಸಂಸ್ಥೆಗಳಿಗೆ ಬದಲಿ ನಿವೇಶನಗಳನ್ನು ನೀಡಬೇಕು, ಮಕ್ಕಳ ಆಟದ ಮೈದಾನವನ್ನು ಬಿಬಿಎಂಪಿಗೆ ಹಸ್ತಾಂತರಿಸಬೇಕು ಎಂದು ಬಿಡಿಎಗೆ ಒತ್ತಾಯಿಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಕರ್ನಾಟಕ ಸಂಗೊಳ್ಳಿರಾಯಣ್ಣ ಯುವಕರ ವೇದಿಕೆ ಪ್ರಧಾನ ಕಾರ್ಯದರ್ಶಿ ಜ್ಞಾನಮೂರ್ತಿ, ಬಹುಜನ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ಬಾಬು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.