ಅಮರಾವತಿ, ಮಾ.31-ಭಾರೀ ಬಿರುಗಾಳಿ ಮತ್ತು ಮಳೆಯಿಂದಾಗಿ ಪೆಂಡಾಲ್ಗಳು ಕುಸಿದು ನಾಲ್ವರು ಯಾತ್ರಿಕರು ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯೆ ಒಂಟಿಮಿಟ್ಟಾದ ಪ್ರಾಚೀನ ರಾಮ ದೇವಾಲಯದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.
ನಿನ್ನೆ ಸಂಜೆ 6.40ರಲ್ಲಿ ಒಂಟಿಮಿಟ್ಟಾ ಪ್ರದೇಶದಲ್ಲಿ ಭಾರೀ ಬಿರುಗಾಳಿಯೊಂದಿಗೆ ಧಾರಾಕಾರ ಮಳೆ ಸುರಿಯಿತು. ರಾಮನವಮಿ ಪ್ರಯುಕ್ತ ಏರ್ಪಡಿಸಲಾಗಿದ್ದ ವಿಶೇಷ ಪೂಜೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಪಾಲ್ಗೊಂಡು ರೇಷ್ಮೆ ವಸ್ತ್ರವನ್ನು ಉಡುಗೊರೆಯಾಗಿ ನೀಡುವ ಕಾರ್ಯಕ್ರಮವಿತ್ತು.
ಮುಖ್ಯಮಂತ್ರಿ ಆಗಮಿಸುವುದಕ್ಕೆ 20 ನಿಮಿಷಗಳ ಮೊದಲು ಈ ಪ್ರದೇಶದಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ತೆಳು ಹಾಳೆಯ ಮೇಲ್ಛಾವಣಿಗಳು ಹಾರಿ ಹೋಗಿ ಒದ್ದೆಯಾಗಿದ್ದ ಪೆಂಡಾಲ್ ಬಿದ್ದು, ನಾಲ್ವರು ಭಕ್ತರು ಮೃತಪಟ್ಟು, ಅನೇಕರು ಗಾಯಗೊಂಡರು. ಇದೇ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಕಾರಣ ಅಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪ್ರಧಾನ ಧಾರ್ಮಿಕ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಹಾಕಿದ್ದ ಪೆಂಡಾಲ್ ಬಂದೋಬಸ್ತ್ ಆಗಿದ್ದ ಕಾರಣ ಹಾನಿ ಸಂಭವಿಸಲಿಲ್ಲ. ಆದರೆ ಭಕ್ತರಿಗಾಗಿ ವ್ಯವಸ್ಥೆಗೊಳಿಸಲಾಗಿದ್ದ ಪೆಂಡಾಲ್ ಕುಸಿದು ಈ ದುರಂತ ಸಂಭವಿಸಿತು. ಗಾಯಾಳುಗಳನ್ನು ಕಡಪದ ರಾಜೀವ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಮಳೆ ಕಾರಣ ಚಂದ್ರಬಾಬು ನಾಯ್ಡು ಒಂದೂವರೆ ತಾಸು ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.