ತುಮಕೂರು, ಮಾ.31- ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಎಲ್ಲಾ ಕ್ಷೇತ್ರಗಳಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಹಳೆಯ ದ್ವೇಷ, ರಾಜಕೀಯ ವೈಮನಸ್ಸುಗಳಿಗೆ ಜನ್ಮ ಪಡೆದುಕೊಂಡಿವೆ.
ಗ್ರಾಪಂ ಉಪಾಧ್ಯಕ್ಷನಿಗೆ ನಿಮ್ಮ ಪಾರ್ಟಿ ಬಿಟ್ಟು ನಮ್ಮ ಪಾರ್ಟಿ ಸೇರ್ಕೋ ಅಂತ ಪಕ್ಷವೊಂದರ ಕೆಲ ಕಾರ್ಯಕರ್ತರು ಕರೆದರಂತೆ. ನಾನು ಬರಲ್ಲ. ಈ ಬಾರಿ ನಮ್ದೇ ಪಾರ್ಟಿ ಗೆಲ್ಲೋದು ಅಂದಿದ್ದಕ್ಕೆ ಆತನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಣಕುಪ್ಪೆಯಲ್ಲಿ ನಡೆದಿದೆ.
ಜೆಡಿಎಸ್ ಬೆಂಬಲಿತ ಗ್ರಾಪಂ ಉಪಾಧ್ಯಕ್ಷ ವೆಂಕಟೇಶ್ ಅವರು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದರು ಎನ್ನಲಾಗಿದ್ದು, ಇದನ್ನು ಸಹಿಸದ ಕೆಲ ವಿರೋಧಿಗಳು ನಿಮ್ಮ ಪಕ್ಷ ಬಿಟ್ಟು ನಮ್ಮ ಪಕ್ಷಕ್ಕೆ ಸೇರಿಕೋ ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಒಪ್ಪದಿದ್ದಕ್ಕೆ ವೆಂಕಟೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ವೆಂಕಟೇಶ್ ಅವರು ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಇವರ ಏಳ್ಗೆ ಸಹಿಸದ ಹಾಲಿ ಶಾಸಕರ ಬೆಂಬಲಿಗರು ನನ್ನ ಗಂಡನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವೆಂಕಟೇಶ್ ಪತ್ನಿ ದೂರಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವೆಂಕಟೇಶ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಜೆಡಿಎಸ್ ಅಭ್ಯರ್ಥಿ ಡಿ.ಸಿ.ಗೌರಿಶಂಕರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ನಂತರ ಹಾಲಿ ಶಾಸಕರ ಬೆಂಬಲಿಗರ ದಬ್ಬಾಳಿಕೆ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಪೆÇಲೀಸರು ಕ್ರಮ ಕೈಗೊಂಡು ಮುಂದೆ ಈ ರೀತಿ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.