ಭಾವನಗರ(ಗುಜರಾತ್):ಮಾ-31: ದಲಿತ ವ್ಯಕ್ತಿಯೋರ್ವ ಗ್ರಾಮದಲ್ಲಿ ಕುದುರೆ ಏರಿ ಸವಾರಿ ಮಾಡಿದ್ದಕ್ಕಾಗಿ ಆತನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಗುಜರಾತ್ನ ಭಾವನಗರ ಜಿಲ್ಲೆಯಲ್ಲಿ ನಡೆದಿದೆ.
21 ವರ್ಷದ ಪ್ರದೀಪ್ ರಾಥೋಡ್ ಮೃತ ದಲಿತ ವ್ಯಕ್ತಿ. ಈತ ಕುದರೆ ಸವಾರಿ ಮಾಡುವುದಕ್ಕೆ ಗ್ರಾಮದ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಬೆದರಿಕೆ ಹಾಕಿದ್ದರು. ಇಷ್ಟಾದರೂ ಆತ ಕುದುರೆ ಏರಿ ಸವಾರಿ ಮಾಡಿದ್ದ. ಇದರಿಂದ ಆಕ್ರೋಶಗೊಂಡ ಕೆಲವರು ಆತನಿಗೆ ಬೆದರಿಕೆಯೊಡ್ಡಿದ್ದರು.
ಬೆದರಿಕೆಗಳು ಬಂದ ಹಿನ್ನಲೆಯಲ್ಲಿ ಪ್ರದೀಪ್ ಕುದುರೆಯನ್ನು ಮಾರಾಟ ಮಾಡಲು ಮುಂದಾಗಿದ್ದ. ಈ ವೇಳೆ ಕುದುರೆಮಾರಾಟ ಮಾಡದಂತೆ ಆತನ ಮನವೊಲಿಸಲಾಗಿತ್ತು. ಶುಕ್ರವಾರ ತಡರಾತ್ರಿಯಾದರೂ ಆತ ಮನೆಗೆ ಬಂದಿರಲಿಲ್ಲ. ಹೀಗಾಗಿ ನಮಗೆ ಸಾಕಷ್ಟು ಭಯವಾಗಿತ್ತು. ನಂತರ, ಪ್ರದೀಪ್ ಗಾಗಿ ಹುಡುಕಾಟ ಆರಂಭಿಸಲಾಗಿತ್ತು. ಈ ವೇಳೆ ನಮ್ಮ ಕೃಷಿ ಭೂಮಿ ಹತ್ತಿರದಲ್ಲಿರುವ ರಸ್ತೆಯಲ್ಲಿ ಪ್ರದೀಪ್ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿರುವುದು ಕಂಡು ಬಂದಿತ್ತು. ಪ್ರದೀಪ್ ಸತ್ತು ಬಿದ್ದಿದ್ದು ಕೆಲವೇ ದೂರದಲ್ಲಿ ಕುದುರೆಯನ್ನೂ ಕೂಡ ಸಾಯಿಸಲಾಗಿತ್ತು ಎಂದು ಪ್ರದೀಪ್ ತಂದೆ ಕಲುಭಾಯ್ ರಾಥೋಡ್ ಅವರು ಹೇಳಿದ್ದಾರೆ.
ಪ್ರಕರಣ ಸಂಬಂಧ ಗ್ರಾಮದ ಹತ್ತಿರದಲ್ಲಿದ್ದ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. ಮುಂದಿನ ತನಿಖೆಗಾಗಿ ಭವನಗರ ಅಪರಾಧ ವಿಭಾಗದ ಸಹಾಯವನ್ನು ಕೇಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರದೀಪ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭವನಗರ ನಾಗರೀಕ ಆಸ್ಪತ್ರೆಯಲ್ಲಿ ಸ್ಥಳಾಂತಿಸಲಾಗಿದೆ ಎಂದು ತಿಳಿಸಿದ್ದಾರೆ.