ಚಿತ್ರದುರ್ಗ, ಮಾ.31-ಕೋಟೆ ನಾಡು ಚಿತ್ರದುರ್ಗ ಕ್ಷೇತ್ರದಲ್ಲಿ ಚುನಾವಣಾ ರಣ ಕಣ ರಂಗೇರಿದೆ. ಈಗಾಗಲೇ ಇತರೆ ಪಕ್ಷದ ಅಭ್ಯರ್ಥಿಗಳು ಮತದಾರರ ಸೆಳೆಯಲು ನಾನಾ ಕಸರತ್ತು ನಡೆಸುತ್ತಿದ್ದಾರೆ.
ಆದರೆ, ಚಿತ್ರದುರ್ಗ ಹಾಗೂ ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದು ಇನ್ನೂ ನಿಗೂಢವಾಗಿರುವುದರಿಂದ ಕಾರ್ಯಕರ್ತರಲ್ಲಿ ತೀವ್ರ ಕುತೂಹಲವನ್ನುಂಟು ಮಾಡಿದೆ. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದನ್ನು ಘೋಷಣೆ ಮಾಡಿದರೆ ಯಾವ ಪಕ್ಷದ ಅಭ್ಯರ್ಥಿ ಗೆಲ್ಲಬಹುದು ಎಂಬ ಲೆಕ್ಕಾಚಾರ ರಾಜಕೀಯ ಮುಖಂಡರಲ್ಲಿದೆ.
ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಕಾಂಗ್ರೆಸ್ ಪಕ್ಷದಿಂದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿ ಕಳೆದ ಬಾರಿ ಪರಾಜಯಗೊಂಡಿದ್ದ ಎನ್.ವೈ.ಗೋಪಾಲಕೃಷ್ಣಗೆ ಈ ಬಾರಿ ಕೈ ಟಿಕೆಟ್ ತಪ್ಪುವ ಸಾಧ್ಯತೆಗಳು ಕಂಡು ಬರುತ್ತಿವೆ.
ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಮೊಳಕಾಲ್ಮೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಕಾರಣ ಈಗಾಗಲೇ ಟಿಕೆಟ್ಗಾಗಿ ನಾನಾ ಕಸರತ್ತು ಆರಂಭಿಸಿ ಕೊನೆಯ ಹಂತ ತಲುಪಿದ್ದಾರೆ ಎನ್ನಲಾಗಿದ್ದು, ಬಹುತೇಕ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇನ್ನು ಚಿತ್ರ ನಟ ಹಾಗೂ ಜಿಲ್ಲೆಯ ಮಾಜಿ ಸಂಸದ ಶಶಿಕುಮಾರ್ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಉತ್ತಮ ಒಡನಾಟವಿರುವ ಕಾರಣ ಅವರು ಸಹ ಟಿಕೆಟ್ಗಾಗಿ ಭಾರಿ ಪೈಪೆÇೀಟಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಚಳ್ಳಕೆರೆ ಕ್ಷೇತ್ರದಲ್ಲೂ ಸಹ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವುದರಿಂದ ಹಾಲಿ ಶಾಸಕ ಟಿ. ರಘುಮೂರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೆಚ್ಚುಗೆಗೆ ಪಾತ್ರವಾಗಿರುವ ಕಾರಣ ಬಹುತೇಕ ಟಿಕೆಟ್ ಖಚಿತವಾಗಿದೆ.ಆದರೂ, ಈ ಹಿಂದಿನ ಚುನಾವಣೆ ಸಂದರ್ಭದಲ್ಲಿ ಟಿಕೆಟ್ಗಾಗಿ ಪೈಪೆÇೀಟಿ ನೀಡಿದ್ದ ಲೋಕೇಶ್ ನಾಯಕ ಎಂಬುವರು ಟಿಕೆಟ್ಗಾಗಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಹಿರಿಯೂರು ಕ್ಷೇತ್ರ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿರುವ ಕಾರಣ 2008ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಜಯಭೇರಿ ಬಾರಿಸಿ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿ, ಕಳೆದ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೇರ್ಪಡೆಯಾಗಿ ಎ.ಕೃಷ್ಣಪ್ಪ ವಿರುದ್ಧ ಗೆಲುವು ಸಾಧಿಸಿದ್ದ ಜೈನ ಸಮುದಾಯದ ಡಿ.ಸುಧಾಕರ್ಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಖಚಿತವಾಗಿದೆ.
ಇನ್ನು ಹೊಸದುರ್ಗ ಕ್ಷೇತ್ರ ಸಾಮಾನ್ಯಕ್ಕೆ ಮೀಸಲಾಗಿರುವುದರಿಂದ ಕಾಂಗ್ರೆಸ್ನ ಹಿರಿಯ ರಾಜಕಾರಣಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕುರುಬ ಸಮಾಜದ ಹಾಲಿ ಶಾಸಕ ಗೋವಿಂದಪ್ಪಗೆ ಟಿಕೆಟ್ ನೀಡಲಾಗುತ್ತಿದೆ.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸ್ಪರ್ಧೆ ಮಾಡಲಿರುವ ಹೊಳಲ್ಕೆರೆ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕಾರಣ, ಇಲ್ಲಿ ಆಂಜನೇಯರನ್ನು ಹೊರತುಪಡಿಸಿ ಇಲ್ಲಿ ಟಿಕೆಟ್ಗಾಗಿ ಯಾರು ಪೈಪೆÇೀಟಿ ನಡೆಸುತ್ತಿಲ್ಲ. ಟಿಕೆಟ್ ಖಚಿತವಾಗಿದೆ.
ಇನ್ನು ಉಳಿದಂತೆ ಜಿಲ್ಲೆಯ ಪ್ರಮುಖ ಕ್ಷೇತ್ರವಾಗಿರುವ ಚಿತ್ರದುರ್ಗ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಭೀಮ ಸಮುದ್ರದ ಜಿ.ಎಸ್. ಮಂಜುನಾಥ್ ಸ್ಪರ್ಧಿಸಿ ತಿಪ್ಪಾರೆಡ್ಡಿ ವಿರುದ್ಧ ಸೋಲುಂಡಿರುವ ಕಾರಣ, ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕುತ್ತಿರುವುದರಿಂದ ಕಾಂಗ್ರೆಸ್ ಟಿಕೆಟ್ಗಾಗಿ ಭಾರಿ ಪೈಪೆÇೀಟಿ ನಡೆಯುತ್ತಿವೆ.
ಹಾಲಿ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಗೆ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಪಕ್ಷದ ಹೈಕಮಾಂಡ್ ಆದೇಶದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದ ಕಾರಣ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಕೈ ಟಿಕೆಟ್ ಸಿಗುವುದು ಅನುಮಾನವಾಗಿದೆ.
ಅಲ್ಲದೆ ಟಿಕೆಟ್ಗಾಗಿ ವರಿಷ್ಠರನ್ನು ಭೇಟಿ ಮಾಡಿದಾಗ ಪಕ್ಷದ ಆದೇಶವನ್ನು ಪಾಲಿಸದ ನಿಮಗೆ ಟಿಕೆಟ್ ನೀಡಲು ಹೇಗೆ ಸಾಧ್ಯ? ಎಂದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ರಘು ಆಚಾರ್ ಹೆಸರು ಬಲವಾಗಿ ಕೇಳಿ ಬರುತ್ತಿದ್ದು, ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವುದರಿಂದ ಜೊತೆಗೆ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬುದು ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಮುಖಂಡರ ಒತ್ತಾಯವಿರುವ ಕಾರಣ ರಘು ಆಚಾರ್ಗೆ ಟಿಕೆಟ್ ತಪ್ಪುವ ಸಾಧ್ಯತೆ ಇದೆ.
ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿರುವುದರಿಂದ, ಚಿತ್ರದುರ್ಗ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಅಧಿಕವಾಗಿರುವ ಕಾರಣ ಅಲ್ಲದೆ, ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯದ ಒಬ್ಬರಿಗೆ ಆದ್ಯತೆ ಕೊಡುವ ಸಾಧ್ಯತೆ ಇರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಹಾಗೂ ಬಿಜೆಪಿ ಸರ್ಕಾರದಲ್ಲಿ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಹನುಮಲಿ ಷಣ್ಮುಖಪ್ಪ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ನ ಬಲ್ಲ ಮೂಲಗಳಿಂದ ಕೇಳಿ ಬರುತ್ತಿದೆ.
ಏ.4ರಂದು ರಾಹುಲ್ ಗಾಂಧಿ ಹೊಳಲ್ಕೆರೆಗೆ ಆಗಮಿಸುತ್ತಿರುವುದರಿಂದ ಅಂದೇ ಚಿತ್ರದುರ್ಗ ಜಿಲ್ಲೆಯ ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬುದು ಖಚಿತವಾಗಲಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಭಾರೀ ಪೈಪೆÇೀಟಿ ನಡೆಯುತ್ತಿದ್ದು ಏ.17 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುವುದರಿಂದ ಅಲ್ಲಿಯವರೆಗೂ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.