ಗೋರಖ್‍ಪುರ್, ಮಾ.31-ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಪಕ್ಷದ ಮಹಾಧಿವೇಶನದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಅಪಮಾನಕರ ಹೇಳಿಕೆ ನೀಡಿದ ಆರೋಪದ ಮೇಲೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಾಗಿದೆ.
ರಾಹುಲ್ ಗಾಂಧಿ ಅವರು ಭಾಷಣದಲ್ಲಿ ಪ್ರಧಾನಿ ಮೋದಿ ಅವರನ್ನು ಪಿಎನ್‍ಬಿ ಬ್ಯಾಂಕ್ ವಂಚನೆಯ ರೂವಾರಿ ಕಳಂಕಿತ ವಜ್ರ ವ್ಯಾಪಾರಿ ನೀರವ್ ಮೋದಿ ಮತ್ತು ಭ್ರಷ್ಟ ಲಲಿತ್ ಮೋದಿ (ಐಪಿಎಲ್ ಮಾಜಿ ಆಯುಕ್ತ) ಅವರಿಗೆ ಹೋಲಿಕೆ ಮಾಡಿದ್ದರು. ಈ ಸಂಬಂಧ ಬಿಜೆಪಿ ವಕ್ತಾರ ಶಲಭ್ ಮಣಿ ತ್ರಿಪಾಠಿ ಅವರು ಡಿಯೊರಿಯಾ ಜಿಲ್ಲಾ ತ್ವರಿತ ನ್ಯಾಯಾಲಯದಲ್ಲಿ ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಏ.5ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ತ್ರಿಪಾಠಿ ಪರ ವಕೀಲರು ಹೇಳಿದ್ದಾರೆ. ರಾಹುಲ್ ಭಾಷಣದಿಂದ ದೇಶದ ಜನತೆ ಮತ್ತು ಬಿಜೆಪಿ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆಯಾಗಿದೆ. ಇದೇ ಕಾರಣಕ್ಕಾಗಿ ಅವರ ವಿರುದ್ಧ ಡಿಯೋರಿಯಾ ಕೋರ್ಟ್‍ನಲ್ಲಿ ಮಾನಹಾನಿ ಖಟ್ಲೆ ದಾಖಲಿಸಲಾಗಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.