ಹಾಸನ, ಮಾ.30-ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಭಾರೀ ಅನ್ಯಾಯವಾಗಿದೆ. ಈ ಬಾರಿ ಜೆಡಿಎಸ್ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡಲಿದೆ. ಯಾರೊಂದಿಗೂ ಮೈತ್ರಿ ಪ್ರಶ್ನೆಯೇ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1994ರಲ್ಲಿ 113 ಸ್ಥಾನಗಳನ್ನು ಪಡೆದು ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲಾಗಿತ್ತು. ಅದೇ ರೀತಿ ಈ ಬಾರಿಯೂ ಸಹ ಪಕ್ಷ ಬಹುಮತದಿಂದ ಸರ್ಕಾರ ರಚನೆ ಮಾಡುವುದು ನಿಶ್ಚಿತ ಎಂದು ಹೇಳಿದರು.
ಸಿ ಫೆÇೀರ್ ಸಮೀಕ್ಷೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಜನರ ವಿಶ್ವಾಸ ನಮ್ಮ ಮೇಲಿದೆ. ಅಧಿಕಾರ ಹಿಡಿಯುವುದು ನಾವೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಗೆ ಐಐಟಿ ಮತ್ತು ವಿಮಾನ ನಿಲ್ದಾಣ ಸ್ಥಾಪನೆಗೆ ಬಹಳಷ್ಟು ಶ್ರಮ ಪಟ್ಟಿದ್ದೆ. ರಾಷ್ಟ್ರೀಯ ಪಕ್ಷಗಳು ಈ ಯೋಜನೆಗಳಿಗೆ ತೊಡಕು ಮಾಡಿದ್ದವು. ಇದರಿಂದ ರಾಷ್ಟ್ರೀಯ ಪಕ್ಷಗಳ ಮೇಲೆ ತುಂಬಾ ಬೇಸರವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುತ್ತಾರೆ ಎಂದು ರಾಜ್ಯದ ಜನತೆ ಹೇಳುತ್ತಿದ್ದಾರೆ. ಅವರ ಮೇಲೆ ಭಾರೀ ವಿಶ್ವಾಸವಿಟ್ಟುಕೊಂಡಿದ್ದಾರೆ. ಮಗನ ಮೇಲಿನ ಮಮಕಾರದಿಂದ ಈ ಮಾತು ಹೇಳುತ್ತಿಲ್ಲ. ಜನರು ಬುದ್ಧಿವಂತರಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತು ಹೋಗಿದ್ದು, ಹಾಗಾಗಿ ಈ ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್ನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದರು.
115 ಸ್ಥಾನ ಗೆಲ್ಲುವುದು ನನ್ನ ಟಾರ್ಗೆಟ್. ಚುನಾವಣೆಗೆ 45 ದಿನಗಳಿವೆ. ಅಷ್ಟು ದಿನವೂ ನಾನು ವಿರಮಿಸದೆ ರಾಜ್ಯ ಸುತ್ತುತ್ತೇನೆ. ರಾಜ್ಯಕ್ಕೆ ಅಲ್ಪಸ್ವಲ್ಪ ಕೆಲಸ ಮಾಡಿದ್ದೇನೆ. ಸಾಮಾಜಿಕ ನ್ಯಾಯದ ಬಗ್ಗೆ ಬೇರೆಯವರಿಂದ ಹೇಳಿಸಿಕೊಳ್ಳಬೇಕಿಲ್ಲ ಎಂದು ಕಿಡಿಕಾರಿದರು.
ಲೋಕಸಭೆಗೆ ಸ್ಪರ್ಧಿಸಲ್ಲ:ದಿನದಿಂದ ದಿನಕ್ಕೆ ನನ್ನ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ನನ್ನ ಬದಲಿಗೆ ಪ್ರಜ್ವಲ್ ರೇವಣ್ಣ ಸ್ಪರ್ಧಿಸಲಿದ್ದಾರೆ ಎಂದು ಪರೋಕ್ಷವಾಗಿ ಸುಳಿವು ನೀಡಿದರು.
ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷದ ಹಿರಿಯರಿಗೆ ಅವಕಾಶ ಕಲ್ಪಿಸಲಾಗುವುದು ಎಂದ ಅವರು, ಒಂದು ವೇಳೆ ಅವರು ಒಪ್ಪದಿದ್ದರೆ ಪ್ರಜ್ವಲ್ ರೇವಣ್ಣ ಅವರೇ ಸ್ಪರ್ಧಿಸಲಿದ್ದಾರೆ ಎಂದರು.
ಮೊಮ್ಮಗ ವಿದ್ಯಾವಂತ ಕೊಂಚ ದುಡುಕು ಅಷ್ಟೇ ಎಂದ ಅವರು, ತಮ್ಮ ತವರು ಜಿಲ್ಲೆಯಲ್ಲಿ ಬೇರೆಯವರು ಸ್ಪರ್ಧೆ ಮಾಡಿದರೆ ಸ್ವಾಗತ. ಇಲ್ಲವಾದರೆ ಪ್ರಜ್ವಲ್ನನ್ನು ಮಗನೆಂದು ತಿಳಿದು ಗೆಲ್ಲಿಸಲಿ ಎಂದರು.
ಸರ್ಕಾರದ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಮುಂದುವರಿಕೆ ಕುರಿತಂತೆ ಕೇಳಿದ ಪ್ರಶ್ನೆಗೆ, ಚುನಾವಣೆಯಲ್ಲಿ ಅವರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ಇಲ್ಲವಾದರೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದರು.
ಮೈಸೂರಿನ ರಾಜವಂಶಸ್ಥರನ್ನು ಅಮಿತ್ ಷಾ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಕಾರಣಕ್ಕೆ ಹೋಗಿದ್ದಾರೋ ತಿಳಿದಿಲ್ಲ ಎಂದ ಅವರು, ಈಗಲಾದರೂ ಅವರಿಗೆ ಬುದ್ದಿ ಬಂದಂತಿದೆ. ದಲಿತರ ಜೊತೆ ಷಾ ಭೋಜನ ಮಾಡುತ್ತಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬಾರದು. ಕಳೆದ ಬಾರಿ ಇದು ನನ್ನ ಕೊನೆಯ ಚುನಾವಣೆ ಎಂದೇ ಹೇಳುತ್ತಿದ್ದರು. ಈರೀತಿಯ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದ ಅವರು, ಅವರ ಬಳಿ ಅಧಿಕಾರವಿದೆ. ಅದಕ್ಕೆ ಯಾರು ಏನೇ ಮಾಡಿದರೂ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು.