ಬೆಂಗಳೂರು, ಮಾ.30-ಕರ್ನಾಟಕದಿಂದಲೇ ಜೆಡಿಯುನ ಹೊಸ ಬಣ ಉದಯವಾಗಲಿದೆ ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಶರದ್ಯಾದವ್ ಇಂದಿಲ್ಲಿ ತಿಳಿಸಿದರು.
ರಾಜ್ಯದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಿತೀಶ್ಕುಮಾರ್ ಜನಾದೇಶಕ್ಕೆ ವಿರುದ್ಧವಾಗಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎಂದು ಹೇಳಿದ ಅವರು, ಜೆಡಿಯುನ ಬಾಣದ ಚಿಹ್ನೆ ಕುರಿತಂತೆ ಕೋರ್ಟ್ನಲ್ಲಿ ತಕರಾರು ಇದೆ. ಸೋಮವಾರ ಈ ವಿಚಾರ ಇತ್ಯರ್ಥವಾಗಲಿದ್ದು, ಹೊಸ ಚಿಹ್ನೆಯೊಂದಿಗೆ ರಾಜ್ಯದ ವಿಧಾನಸಭೆ ಚುನಾವಣೆಗೆ ಹೊಸ ಜೆಡಿಯು ಬಣಕ್ಕೆ ಇಲ್ಲಿಂದಲೇ ಚಾಲನೆ ನೀಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ ಎಂಬೆಲ್ಲ ವಿಚಾರವನ್ನು 24 ಗಂಟೆಯೊಳಗೆ ನಿರ್ಧರಿಸಿ ತೀರ್ಮಾನ ಕೈಗೊಳ್ಳಲಿದ್ದೇವೆ. ಸೋಮವಾರ ಅಧಿಕೃತವಾಗಿ ಹೊಸ ಬಣದೊಂದಿಗೆ ಸ್ಪರ್ಧೆ ವಿಚಾರವನ್ನು ತಿಳಿಸಲಿದ್ದೇವೆ ಎಂದು ವಿವರಿಸಿದರು.
ಬಿಜೆಪಿ ಕಿತ್ತೊಗೆಯಲು ಮೈತ್ರಿಗೆ ಸಿದ್ಧ:
ಕರ್ನಾಟಕದಲ್ಲಿ ಕೋಮುವಾದಿ ಶಕ್ತಿಯಾದ ಬಿಜೆಪಿಯನ್ನು ಕಿತ್ತೊಗೆಯುವುದು ಬಹಳ ಮುಖ್ಯವಾಗಿದೆ. ಆ ಕಾರಣಕ್ಕಾಗಿ ನಾವು ಜೆಡಿಎಸ್ ಅಥವಾ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷದೊಂದಿಗೆ ಕೈ ಜೋಡಿಸಲು ಸಿದ್ಧ ಎಂದರು.
ಕಾಂಗ್ರೆಸ್ನಲ್ಲಿ ಅವಕಾಶಗಳು ಮುಗಿದುಹೋಗಿವೆ. ಹಾಗಾಗಿ ಜೆಡಿಎಸ್ನೊಂದಿಗೆ ಮೈತ್ರಿ ಸಾಧಿಸಲು ಇಚ್ಚಿಸಿದ್ದೇವೆ. ಈ ನಿಟ್ಟಿನಲ್ಲಿ ಮಾತುಕತೆ ನಡೆಸಿ 24 ಗಂಟೆಯೊಳಗೆ ನಿರ್ಧಾರಕ್ಕೆ ಬರಲಿದ್ದೇವೆ ಎಂಬ ಮಾಹಿತಿ ನೀಡಿದರು.
ಕಾರ್ಯಕರ್ತರ ಸಭೆ ನಡೆಸಿ ಎಲ್ಲ ತೀರ್ಮಾನ ಕೈಗೊಳ್ಳಲಿದ್ದೇವೆ. ಬಿಜೆಪಿಯನ್ನು ಕರ್ನಾಟಕದಲ್ಲಿ ಸೋಲಿಸಲೇಬೇಕು. 2019ರ ಫೈನಲ್ ಚುನಾವಣೆಗೆ ರಾಜ್ಯದ ವಿಧಾನಸಭಾ ಚುನಾವಣೆ ಸೆಮಿಫೈನಲ್ ಎನಿಸಿದೆ. ಈ ನಿಟ್ಟಿನಲ್ಲಿ ಬಿಜೆಪಿ ವಿರುದ್ಧ ಜನಾದೇಶ ನೀಡಬೇಕಾಗಿದೆ ಎಂದು ಹೇಳಿದರು.
ಕರ್ನಾಟಕ ಹೋರಾಟದಲ್ಲಿ ಐತಿಹಾಸಿಕ ಹಿನ್ನೆಲೆ ಪಡೆದಿದೆ. ಉತ್ತರದಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿ ಹಾಗೂ ದಕ್ಷಿಣದಲ್ಲಿ ಟಿಪ್ಪು ಮೊದಲ ಬಾರಿಗೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ್ದರು.
ಅದೇ ಮಾದರಿಯಲ್ಲಿ ಹೋರಾಟ ರೂಪಿಸಿ ಕೋಮುವಾದಿ ಶಕ್ತಿಗಳನ್ನು ಹತ್ತಿಕ್ಕುವ ಕೆಲಸವನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ಬೇರೆ ಪಕ್ಷಗಳೊಂದಿಗೂ ಮೈತ್ರಿ ಸಾಧಿಸಲು ಹಿಂದೆ ಸರಿಯುವುದಿಲ್ಲ. ಹಿಂದಿನ ಇತಿಹಾಸ ಮರುಕಳಿಸುವ ರೀತಿಯಲ್ಲಿ ಮತ ಹಾಕಿ ಎಂದು ಕರೆ ನೀಡಿದರು.
ಇದುವರೆಗೂ ಬಿಜೆಪಿಯವರು ಹೇಳಿದ್ದರಲ್ಲಿ ಯಾವುದನ್ನೂ ಮಾಡಿಲ್ಲ. ವಿಷಯಾಧಾರಿತ ಆಡಳಿತ ನಡೆಸಲೇ ಇಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿಕೊಂಡಿದ್ದರು. ಕಪ್ಪು ಹಣ ವಾಪಸ್ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುವ ಭರವಸೆಯನ್ನೂ ಈಡೇರಿಸಿಲ್ಲ. ಕಳೆದ ನಾಲ್ಕು ವರ್ಷಗಳಿಂದ ವಿಷಯೇತರವಾಗಿ ಆಡಳಿತ ನಡೆಸಿದ್ದಾರೆ. ಘರ್ ವಾಪಸಿ (ಮರಳಿ ಮನೆಗೆ), ಲವ್ ಜಿಹಾದ್ನಂತಹ ವಿಷಯಗಳನ್ನಿಟ್ಟುಕೊಂಡು ಭಾವನಾತ್ಮಕವಾಗಿ ಪರಿಣಾಮ ಬೀರುವ ರೀತಿಯಲ್ಲಿ ಕಾಲಹರಣ ಮಾಡುತ್ತಾ ಬಂದಿದ್ದಾರೆ. ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.